ಲಾರಿ ಚಕ್ರ ಸ್ಫೋಟದಿಂದ ಸರಣಿ ಅಪಘಾತ: ನಾಲ್ವರು ಸಾವು, 10 ಮಂದಿಗೆ ಗಾಯ

Prasthutha|

ಚಿತ್ರದುರ್ಗ: ಈರುಳ್ಳಿ ತುಂಬಿದ್ದ ಲಾರಿಯ ಚಕ್ರ ಸ್ಫೋಟಗೊಂಡು ಪಲ್ಟಿಯಾದ ಪರಿಣಾಮ ಕಾರು ಲಾರಿಗಳ ಮಧ್ಯೆ ಭೀಕರ ಸರಣಿ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, 10ಕ್ಕೂ ಹೆಚ್ಚು ಜನ ಗಾಯಗೊಂಡಿರುವ ದುರ್ಘಟನೆ ಹಿರಿಯೂರಿನ ರಾಷ್ಟ್ರೀಯ ಹೆದ್ದಾರಿ 4ರ ಬಳಿ ಸೋಮವಾರ ಮುಂಜಾನೆ  ನಡೆದಿದೆ.

- Advertisement -

ಸರಣಿ ರಸ್ತೆ ಅಪಘಾತದಲ್ಲಿ ಮೃತಪಟ್ಟವರನ್ನು ಗದಗ ಜಿಲ್ಲೆಯ ಹುಯಿಲಗೋಳದ ಹನುಮಪ್ಪ ಕಳಕಪ್ಪ ಹುನಗುಂದಿ (30), ಗುರಪ್ಪಾ ಹುಗರ್ (26), ರಮೇಶ್ (28), ಪ್ರಶಾಂತ್ ಹಟ್ಟಿ (36) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಹಿರಿಯೂರು ಹಾಗೂ ಚಿತ್ರದುರ್ಗದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ಮೂವರು ಸ್ಥಿತಿ ಗಂಭೀರವಾಗಿದೆ.

ಈರುಳ್ಳಿ ತುಂಬಿಕೊಂಡು ಚಿತ್ರದುರ್ಗ ಕಡೆಯಿಂದ ಬೆಂಗಳೂರಿನತ್ತ ಹೋಗುತ್ತಿದ್ದ ಲಾರಿ ಟೈರ್ ಸ್ಫೋಟಗೊಂಡು ಉರುಳಿ ಬಿದ್ದಿದೆ. ಪರಿಣಾಮ ಹಿಂದೆ ವೇಗವಾಗಿ ಬರುತ್ತಿದ್ದ ಕಾರು, ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಈರುಳ್ಳಿ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದರ ಜೊತೆ ಇನ್ನೂ ಎರಡು ಲಾರಿಗಳು ಪಲ್ಟಿಯಾಗಿವೆ.

- Advertisement -

ಅಪಘಾತ ಸ್ಥಳಕ್ಕೆ ಎಸ್ಪಿ ಜಿ ರಾಧಿಕಾ, ಡಿವೈಎಸ್ಪಿ ರೋಷರ್ ಜಮೀರ್, ಸಿಪಿಐ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

Join Whatsapp