ಬೆಂಗಳೂರು: ಜಿಎಸ್ ಟಿ ಪ್ರಮಾಣವನ್ನು ಇಳಿಸಿ ಪತ್ರಿಕಾ ಸಂಸ್ಥೆಗಳಿಗೆ ಮುದ್ರಣ ಕಾಗದದ ಲಭ್ಯತೆ ಸುಗಮವಾಗಿ ಮತ್ತು ಸರಳವಾಗಿರುವಂತೆ ನೀತಿ ರೂಪಿಸಬೇಕು ಎಂದು ಒತ್ತಾಯಿಸಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಪತ್ರದ ಸಾರಾಂಶ
ಭಾರತ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದು ಈ ಪ್ರಜಾತಂತ್ರದ ಮೌಲ್ಯಗಳನ್ನು ರಕ್ಷಿಸುವುದು ಚುನಾಯಿತ ಸರ್ಕಾರದ ಕರ್ತವ್ಯ ಕೂಡ ಆಗಿದೆ. ಮಾಧ್ಯಮ ಕ್ಷೇತ್ರ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ. ಜನರ ಧ್ವನಿಯಾಗಿ ಮಾಧ್ಯಮ ಕ್ಷೇತ್ರ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸುವ ನಾಗರಿಕ ಜವಾಬ್ದಾರಿಯನ್ನು ಮುಂದುವರಿಸುವಂತೆ ನೋಡಿಕೊಳ್ಳಬೇಕಿದೆ. ಅದರಲ್ಲೂ ಮುದ್ರಣ ಮಾಧ್ಯಮಕ್ಕೆ ಬಹಳ ಜನಪರವಾದ ಚರಿತ್ರೆ ಇದೆ. ಆದರೆ ಕೇಂದ್ರದ ಬಿಜೆಪಿ ಸರ್ಕಾರದ ಕೆಲವೊಂದು ಕ್ರಮಗಳು ಮತ್ತು ಪಾಲಿಸಿಗಳು ಮುದ್ರಣ ಮಾಧ್ಯಮ ನಿರಾತಂಕವಾಗಿ ಮುಂದುವರಿಯಲು ಸಾಧ್ಯವಿಲ್ಲದ ಪರಿಸ್ಥಿತಿಯನ್ನು ಸೃಷ್ಟಿಸಿದೆ .
ಪತ್ರಿಕಾಲಯಗಳು ಕಾಗದದ ಮೇಲೆ ನೀಡಬೇಕಿದ್ದ ತೆರಿಗೆಯ ಪ್ರಮಾಣ ಈಗ ಶೇ 68 ರಷ್ಟು ಹೆಚ್ಚಿಗೆಯಾಗಿದೆ. ದೇಶದಲ್ಲಿ ಜಿಎಸ್ಟಿ ಜಾರಿಗೆ ಬರುವ ಮುನ್ನ ಮುದ್ರಣ ಕಾಗದದ ಮೇಲೆ ಒಟ್ಟಾರೆ ಶೇ 3 ರಷ್ಟು ಮಾತ್ರ ತೆರಿಗೆ ಬೀಳುತ್ತಿತ್ತು. ಆದರೆ ಜಿಎಸ್ಟಿ ಬಳಿಕ ಮುದ್ರಣ ಕಾಗದದ ಮೇಲೆ ಶೇ 5 ರಷ್ಟು ತೆರಿಗೆ ಹೇರಲಾಗಿದೆ. ಆರ್ಎನ್ಐ ನೋಂದಾಯಿತ ಪತ್ರಿಕಾ ಸಂಸ್ಥೆಗಳಿಗೆ ಶೇ 5 ರಷ್ಟು ಜಿಎಸ್ಟಿ ನಿಗದಿ ಮಾಡಲಾಗಿದ್ದರೆ, ನೋಂದಾಯಿತವಲ್ಲದ ಸಂಸ್ಥೆಗಳು ಮತ್ತು ಪುಸ್ತಕ ಪ್ರಕಾಶನ ಸಂಸ್ಥೆಗಳಿಗೆ ಶೇ 12 ರಷ್ಟು ಜಿಎಸ್ಟಿ ನಿಗದಿ ಮಾಡಲಾಗುತ್ತಿದೆ. ಹೀಗಾಗಿ ಪತ್ರಿಕಾ ಸಂಸ್ಥೆಗಳಿಗೆ ಅಗತ್ಯ ಪ್ರಮಾಣದಲ್ಲಿ ಕಾಗದ ದೊರಕುತ್ತಿಲ್ಲ.
ಇದರ ಒಟ್ಟು ಪರಿಣಾಮದಲ್ಲಿ ಪತ್ರಿಕೆಗಳ ದರ ಹೆಚ್ಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಜಿಎಸ್ಟಿ ಪ್ರಮಾಣ ಹೆಚ್ಚಳದ ಜತೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ವಿಪರೀತ ಏರಿಕೆ, ಮುದ್ರಣ ಕಾಗದಕ್ಕೆ ಬೇಕಾದ ಕಚ್ಛಾ ಪದಾರ್ಥಗಳ ಕೊರತೆ, ಶಿಪ್ಪಿಂಗ್ ಕಂಟೇನರ್ಗಳ ಕೊರತೆ, ಕಾರ್ಮಿಕರ ಕೊರತೆ, ಕೋವಿಡ್ ಸಾಂಕ್ರಾಮಿಕ ಸೃಷ್ಟಿಸಿದ ಪರಿಣಾಮಗಳು ಎಲ್ಲವೂ ಸೇರಿ ಒಂದು ಟನ್ ಮುದ್ರಣ ಕಾಗದವನ್ನು ಆಮದು ಮಾಡಿಕೊಳ್ಳುವ ದರ ಮೊದಲಿದ್ದ ರೂ 23,000 ದಿಂದ ಈಗ 55000-60000 ಕ್ಕೆ ಏರಿಕೆಯಾಗಿದೆ. ಸದ್ಯ ಶೇ 56 ರಷ್ಟು ಮುದ್ರಣ ಕಾಗದ ವಿದೇಶಗಳಿಂದ ಭಾರತಕ್ಕೆ ರಫ್ತಾಗುತ್ತಿದ್ದರೆ ಶೇ 44 ರಷ್ಟು ಮಾತ್ರ ದೇಶದ ಒಳಗೆ ಉತ್ಪಾದನೆ ಆಗುತ್ತಿದೆ. ಇವೆಲ್ಲಾ ಕಾರಣಗಳು ಸೇರಿ ಕಳೆದ 2 ವರ್ಷಗಳಲ್ಲಿ ಪತ್ರಿಕೆಗಳ ಮುದ್ರಣ ವೆಚ್ಚ ದುಪ್ಪಟ್ಟಾಗಿದೆ. ಜತೆಗೆ ನಾನಾ ಕಾರಣಗಳಿಂದ ದೇಶದ ವಾಣಿಜ್ಯ-ವಹಿವಾಟು ಕುಂಠಿತಗೊಂಡಿರುವುದು, ಇತರೆ ಉದ್ಯಮ ಕ್ಷೇತ್ರಗಳು ಎದುರಿಸುತ್ತಿರುವ ಸಮಸ್ಯೆಗಳ ಕಾರಣದಿಂದ ಪತ್ರಿಕೆಗಳಿಗೆ ಬರುತ್ತಿದ್ದ ಜಾಹಿರಾತು ಪ್ರಮಾಣವೂ ವ್ಯಾಪಕವಾಗಿ ಕುಸಿದಿದೆ. ಕೋವಿಡ್ ಸಾಂಕ್ರಾಮಿಕ-ಲಾಕ್ಡೌನ್ ಗಳ ಪರಿಣಾಮ ಪತ್ರಿಕೆಗಳ ಪ್ರಸರಣ ವ್ಯವಸ್ಥೆಯೂ ಹದಗೆಟ್ಟು ಒಟ್ಟಾರೆ ಪತ್ರಿಕೆಗಳನ್ನು ನಡೆಸುವುದೇ ದುಸ್ತರವಾಗಿ ಹಲವಾರು ಸಣ್ಣ-ಮಧ್ಯಮ ಮತ್ತು ದೊಡ್ಡ ಸಂಸ್ಥೆಗಳೂ ಆದಾಯ ಕೊರತೆ ಎದುರಿಸಿ ಬಂದ್ ಆಗಿವೆ.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ, ವಿದೇಶಿ ಆಕ್ರಮಣಗಳ ವಿರುದ್ಧ ದೇಶದ ಜನರನ್ನು ಒಗ್ಗೂಡಿಸಿ ದೇಶದ ಸಾರ್ವಭೌಮತ್ವವನ್ನು ಉಳಿಸುವ ಮತ್ತು ನಿರಂತರವಾಗಿ ಪ್ರಜಾಪ್ರಭುತ್ವದ ಕಾವಲಿಗೆ ನಿಂತು ದೇಶದ ಪ್ರಜಾತಂತ್ರವನ್ನು ಕಾಪಾಡುವುದರಲ್ಲಿ ಮುದ್ರಣ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ದೇಶೀಯ ಮುದ್ರಣ ಕಾಗದದ ಗುಣಮಟ್ಟ ಹೆಚ್ಚಿಸಲು ಇನ್ಸೆಂಟೀವ್ಗಳನ್ನು ಕೊಡಬೇಕು. ಜಿಎಸ್ಟಿ ಪ್ರಮಾಣವನ್ನು ಇಳಿಸಬೇಕು. ಪತ್ರಿಕಾ ಸಂಸ್ಥೆಗಳಿಗೆ ಮುದ್ರಣ ಕಾಗದದ ಲಭ್ಯತೆ ಸುಗಮವಾಗಿ ಮತ್ತು ಸರಳವಾಗಿರುವಂತೆ ನೀತಿ ರೂಪಿಸಬೇಕು ಎಂದು ಒತ್ತಾಯಿಸುತ್ತೇನೆ.