ಪ್ರಧಾನಿಯನ್ನು ಜುಮ್ಲಾ ಎಂದುದು ಸರಿಯೇ? ಉಮರ್ ಖಾಲಿದ್ ಜಾಮೀನು ಅರ್ಜಿಗೆ ಕೋರ್ಟ್ ಪ್ರಶ್ನೆ

Prasthutha|

ನವದೆಹಲಿ: ಸರಕಾರವನ್ನು ಟೀಕಿಸುವಾಗ ಒಂದು ಲಕ್ಷ್ಮಣ ರೇಖೆ ಅಗತ್ಯ. ಪ್ರಧಾನಿ ಬಗ್ಗೆ ಜುಮ್ಲಾ ಎಂಬ ಪದ ಬಳಕೆ ಸರಿಯೇ ಎಂದು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಜಾಮೀನು ವಿಚಾರಣೆ ವೇಳೆ ದಿಲ್ಲಿ ಹೈಕೋರ್ಟ್ ಪ್ರಶ್ನಿಸಿದೆ.

- Advertisement -


ವಾಯವ್ಯ ದಿಲ್ಲಿ ಗಲಭೆಯಲ್ಲಿ ದೊಡ್ಡ ಸಂಚು ರೂಪಿಸಿದವರು ಎಂಬ ಆರೋಪಕ್ಕೆ ಒಳಗಾಗಿರುವ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ ನ್ಯಾಯಾಲಯ ಈ ಜುಮ್ಲಾ ಪ್ರಶ್ನೆಯನ್ನು ಎತ್ತಿತು.
“ಭಾಷಣದಲ್ಲಿ ಅವರು ಪ್ರಧಾನಿ ಬಗೆಗೆ ಏನು ಹೇಳಿದರು? ಮೊದಲು ಚಾಂಗಾ ಎಂಬ ಶಬ್ದವನ್ನೂ ಆಮೇಲೆ ಜುಮ್ಲಾ ಎಂಬ ನುಡಿಯನ್ನೂ ಬಳಸಿದ್ದಾರೆ.” 2020ರ ಫೆಬ್ರವರಿಯಲ್ಲಿ ಉಮರ್ ಖಾಲಿದ್ ಅಮರಾವತಿಯಲ್ಲಿ ಮಾಡಿದ ಭಾಷಣ ಕೇಳಿ ಕೋರ್ಟ್ ಹೀಗೆ ಹೇಳಿತು.


ಖಾಲಿದ್ ಪರ ಹಾಜರಾದ ಹಿರಿಯ ವಕೀಲ ತ್ರಿದೀಪ್ ಪಯಸ್ ಅವರು ಅವೆಲ್ಲ ಕಾನೂನು ಬಾಹಿರ ಶಬ್ದಗಳಲ್ಲ ಎಂದು ವಾದಿಸಿದರು. “ಸರಕಾರವನ್ನು ಟೀಕಿಸುವುದು ಅಪರಾಧ ಎನಿಸುವುದಿಲ್ಲ. ಸರಕಾರವನ್ನು ಟೀಕಿಸುವವರು 583 ದಿನ ಯುಎಪಿಎ ಅಡಿ ಜೈಲಿನಲ್ಲಿ ಕಳೆಯಬೇಕೆ? ಹಾಗಾದರೆ ಟೀಕೆ ಬೇಡವೆ? ನಾವು ಅಷ್ಟು ಅಸಹಿಷ್ಣುಗಳಾಗುವುದು ಸರಿಯಲ್ಲ. ಹೀಗಾದರೆ ಜನಸಾಮಾನ್ಯರು ಮಾತನಾಡುವುದೇ ಕಷ್ಟವಾಗುತ್ತದೆ.?” ಎಂದು ವಕೀಲ ಪಯಸ್ ವಾದಿಸಿದರು.

- Advertisement -


ಖಾಲಿದ್ ಮೇಲಿನ ಎಫ್ಐಆರ್ ಅಸಹಿಷ್ಣುತೆ ಮತ್ತು ವಾಕ್ ಸ್ವಾತಂತ್ರ್ಯದ ಮೇಲಿನ ಹಲ್ಲೆಯಾಗಿದೆ ಎಂದು ಅವರು ಹೇಳಿದರು.
ಏಪ್ರಿಲ್ 22ರಂದೇ ವಿಭಾಗೀಯ ಪೀಠದ ಜಸ್ಟಿಸ್ ಗಳಾದ ಸಿದ್ಧಾರ್ಥಾ ಮೃದುಲ್ ಮತ್ತು ರಜನೀಶ್ ಭಟ್ನಾಗರ್ ಅವರು ಖಾಲಿದ್ ಅವರ ಅಮರಾವತಿ ಭಾಷಣವು ದ್ವೇಷದ್ದು, ಶಿಕ್ಷಾರ್ಹ ಮತ್ತು ಅಸಹ್ಯವಾದುದು ಎಂದು ಹೇಳಿದ್ದರು.


“ಇದು ಅಸಹ್ಯ ಮತ್ತು ಆಕ್ರಮಣಕಾರಿ ಎಂದು ನಿಮಗೆ ಅನಿಸುವುದಿಲ್ಲವೆ? ನಿಮ್ಮ ಪೂರ್ವಜರು ಬ್ರಿಟಿಷರ ಗುಲಾಮಗಿರಿ ಮಾಡಿದವರು ಎಂದು ನೀವು ಟೀಕಿಸಿದ್ದೀರಿ. ಇದು ಆಕ್ರಮಣಕಾರಿಯಾದುದು. ಇದು ಮೊದಲ ಬಾರಿಯೇನಲ್ಲ ನೀವು ಮಾತನಾಡಿದ್ದು, ಇದನ್ನು ನೀವು ಐದು ಬಾರಿಯಾದರೂ ಹೇಳಿರುವಿರಿ. ನಿಮ್ಮ ಲೆಕ್ಕದಲ್ಲಿ ಭಾರತದ ಸ್ವಾತಂತ್ರ್ಯಕ್ಕೆ ಒಂದು ನಿಶ್ಚಿತ ಸಮುದಾಯ ಮಾತ್ರ ಹೋರಾಡಿತೇ?” ಎಂದು ವಿಭಾಗೀಯ ಪೀಠ ಪ್ರಶ್ನಿಸಿತ್ತು.


ಖಾಲಿದ್ ಅವರ ವಕೀಲರು ಆ ಭಾಗವನ್ನು ಓದಿ ಹೇಳಿದರು. 1920ರಲ್ಲಿ ಮಹಾತ್ಮಾ ಗಾಂಧೀಜಿಯವರು ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿಯನ್ನು ಆರಂಭಿಸಿದಾಗ ಗಾಂಧೀಜಿಯ ಕರೆಯ ಮೇರೆಗೆ ಮೊದಲಿಗೆ ಜಾಮಿಯಾ ಮಿಲ್ಲಿಯಾ ವಿಶ್ವ ವಿದ್ಯಾನಿಲಯವು ಆರಂಭವಾಯಿತು. ಈಗ ಆ ವಿಶ್ವವಿದ್ಯಾನಿಲಯವು ಗುಂಡೇಟುಗಳನ್ನು ತಿನ್ನುತ್ತಿದೆ ಮತ್ತು ಅಲ್ಲಿರುವವರೆಲ್ಲ ದೇಶದ್ರೋಹಿಗಳು ಎಂದು ಹೇಳಲಾಗುತ್ತಿದೆ ಎಂದು ಹೇಳಿದರು.


“ನಾವು ಇವರಿಗೆ ಚರಿತ್ರೆಯನ್ನು ಕಲಿಸಬೇಕಾಗಿದೆ. ನಿಮ್ಮ ಪೂರ್ವಜರು ಬ್ರಿಟಿಷರ ಚಾಕರಿ ಮಾಡುತ್ತಿದ್ದಾಗ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬ್ರಿಟಿಷ್ ಸರಕಾರದ ವಿರುದ್ಧ ಹೋರಾಡುತ್ತಿದ್ದರು” ಖಾಲಿದ್ ಭಾಷಣದ ಭಾಗವಿದು.
ಆರೆಸ್ಸೆಸ್, ಹಿಂದೂ ಮಹಾ ಸಭಾ ಇವುಗಳ ಪೂರ್ವಜರು ಬ್ರಿಟಿಷರ ದಲ್ಲಾಳಿ ಮಾಡುತ್ತಿದ್ದರು ಎಂದು ಖಾಲಿದ್ ಇದಕ್ಕೆ ಮೊದಲು ಹೇಳುತ್ತಾರೆ. ಆದರೆ ಈಗ ಇವರೆದುರು ಜನರು ತಮ್ಮ ಮೂಲ, ಪೌರತ್ವ ಎಲ್ಲ ಸಾಬೀತು ಪಡಿಸಬೇಕಾಗಿದೆ.


“ಈ ಮಾತುಗಳು ಧಾರ್ಮಿಕ ಗುಂಪುಗಳ ನಡುವೆ ದ್ವೇಷಕ್ಕೆ ಕಾರಣವಾಗುವುದಿಲ್ಲವೇ” ಎಂದು ಕೋರ್ಟು ಕೇಳಿತು.
ಡಿಸೆಂಬರ್ 2019ರಲ್ಲಿನ ಜಾಮಿಯಾ ಮಿಲ್ಲಿಯಾ ಭಾಷಣದಲ್ಲಿ ಇನ್ನಷ್ಟು ವಿದ್ಯಾರ್ಥಿಗಳನ್ನು ಕೆರಳಿಸಿ ಗಲಭೆಗೆ ಹಚ್ಚುವ ವಿಷಯಗಳಿದ್ದವು ಎಂಬುದಕ್ಕೆ ಬುಧವಾರ ಖಾಲಿದ್ ರ ವಕೀಲರಾದ ಪಯಸ್ ಹೀಗೆ ಉತ್ತರಿಸಿದರು. “ಈ ಮಾತು ಧಾರ್ಮಿಕ ಸಮುದಾಯಗಳ ಬಗ್ಗೆ ಹೇಳಿದ್ದಲ್ಲ. ಇದು ಒಂದೆರಡು ಸಂಘಟನೆಗಳ ಬಗ್ಗೆ ಹೇಳುವುದಾಗಿದೆ. ಆ ಸಂಘಟನೆಗಳ ಪೂರ್ವಜರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ಹೇಳುವುದಾಗಿದೆ ಅದು. ಅದೇ ಕಾಲದಲ್ಲಿ ಆಗ ಜಾಮಿಯಾ ಮಿಲ್ಲಿಯಾದವರು ಸ್ವಾತಂತ್ರ್ಯ ಹೋರಾಟದಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು. ಇಲ್ಲಿ ನನ್ನ ಕಕ್ಷಿದಾರ ಯಾವ ಸಮುದಾಯವನ್ನು ಯಾವುದೇ ಸಮುದಾಯದ ಮೇಲೆ ಎತ್ತಿ ಕಟ್ಟುತ್ತಿಲ್ಲ. ಅದನ್ನು ನಾನು ಸ್ಪಷ್ಟೀಕರಿಸುತ್ತಿದ್ದೇನೆ ಅಷ್ಟೆ.” ಎಂದು ಪಯಸ್ ಹೇಳಿದರು.
ಕೆಳ ಕೋರ್ಟು ಖಾಲಿದ್ ರ ಜಾಮೀನು ಅರ್ಜಿಯನ್ನು ವಜಾ ಮಾಡಿರುವುದನ್ನು ದಿಲ್ಲಿ ಹೈಕೋರ್ಟು ವಿಚಾರಣೆಗೆ ಎತ್ತಿಕೊಂಡಿದೆ. ವಿಚಾರಣೆ ಇನ್ನೂ ಮುಂದುವರಿಯುತ್ತದೆ.

Join Whatsapp