40 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಮಾಜಿ ಸೈನಿಕನಿಗೆ ಅರಣ್ಯ ಇಲಾಖೆಯಿಂದ ಅನ್ಯಾಯ: ಪ್ರತಿಭಟನೆಯ ಎಚ್ಚರಿಕೆ

Prasthutha|

ಬೆಂಗಳೂರು: ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ನೀಲಗುಂದ ಗ್ರಾಮದ ಮಾಜಿ ಸೈನಿಕ ವಿಠಲ ದ್ಯಾಮಣ್ಣ ನಿಂಬಣ್ಣವರ ಅವರು 40 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ 8 ಎಕರೆ ಜಮೀನನ್ನು ಸಕ್ರಮಗೊಳಿಸದೆ ಕಿರುಕುಳ ಹಾಗೂ ತಾರತಮ್ಯ ಮಾಡುತ್ತಿರುವ ಬಾಗಲ ಕೋಟೆ ಜಿಲ್ಲೆ ಅರಣ್ಯ ಅಧಿಕಾರಿಗಳ ವಿರುದ್ಧ ಮಲ್ಲೇಶ್ವರದಲ್ಲಿರುವ ಪ್ರದಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ದೂರು ನೀಡಿದೆ.

- Advertisement -

ಬಾದಾಮಿ ತಾಲ್ಲೂಕಿನ ನೀಲಗುಂದ ಗ್ರಾಮದ ಅರಣ್ಯ ಸರ್ವೆ ನಂ. 436 ರ ವ್ಯಾಪ್ತಿಯಲ್ಲಿ ಒಟ್ಟು 387.03 ಎಕರೆ ಜಮೀನಿದ್ದು, ಸುಮಾರು 1978 ರ ಪೂರ್ವದಿಂದಲೂ ಈ ಪ್ರದೇಶದ ವ್ಯಾಪ್ತಿಯಲ್ಲಿ 8 ಎಕರೆ ಜಮೀನನ್ನು, ಸಾಗುವಳಿ ಮಾಡುತ್ತಾ ಬಂದಿರುತ್ತಾರೆ. ಸುಮಾರು 45 ವರ್ಷದಿಂದ ಜಮೀನನ್ನು ಸಾಗುವಳಿ ಮಾಡಿಕೊಂಡು ಬಂದಿರುವ ಇವರು 8 ಎಕರೆ ಜಮೀನನ್ನು ಸಕ್ರಮಗೊಳಿಸಬೇಕೆಂದು ಅನೇಕ ವರ್ಷಗಳಿಂದ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಆದರೆ ಅರಣ್ಯ ಇಲಾಖೆ ಇದುವರೆವಿಗೂ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಸಂಘದ ರಾಜ್ಯಾಧ್ಯಕ್ಷ ಡಾ. ಎನ್.ಕೆ. ಶಿವಣ್ಣ ತಿಳಿಸಿದ್ದಾರೆ.

ಇದೇ ಸರ್ವೆ ನಂಬರಿನ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ನಾಗಪ್ಪ ಬಿನ್ ಶಿವಪ್ಪ ಬದಾಮಿ ಅವರಿಗೆ ಎಂ.ಆರ್ ನಂ. 47/2009-10 ರಲ್ಲಿ ಅಕ್ರಮ ಸಕ್ರಮದಡಿಯಲ್ಲಿ 2009 ಆಕ್ಟೋಬರ್ 30 ರಂದು ಜಮೀನನನ್ನು ಸಕ್ರಮಮಾಡಿದ್ದಾರೆ. ಅದೇ ರೀತಿ ಸರ್ಕಾರದ ಆದೇಶ ಸಂಖ್ಯೆ. 222 ಪವಯೋ 2013 ದಿನಾಂಕ: 2014, ಏಪ್ರೀಲ್, 3 ರಂದು ಆದೇಶದಂತೆ ವಿಠಲ ನಿಂಬಣ್ಣನವರಿಗೂ ಸಹ ಸದರಿ ಜಮೀನನ್ನು ಸಕ್ರಮಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮನವಿಮಾಡಿದ್ದರು. ಇದುವರೆಗೂ ಮಾಡಿರುವುದಿಲ್ಲ ಎಂದು ಹೇಳಿದ್ದಾರೆ.

- Advertisement -

ಈ ಬಗ್ಗೆ ವಿಚಾರಣೆ ನಡೆಸಿ ಜಮೀನನ್ನು ಸಕ್ರಮಗೊಳಿಸಬೇಕು. ಇಲ್ಲವಾದಲ್ಲಿ ಬೆಂಗಳೂರು, ಕೇಂದ್ರ ಅರಣ್ಯ ಭವನ ಮುಂದೆ ಉಪವಾಸ ಸತ್ಯಾಗ್ರಹ, ಪ್ರತಿಭಟನಾ ಧರಣೆ ನಡೆಸುವುದಾಗಿ ಸಂಘದ ರಾಜ್ಯಾಧ್ಯಕ್ಷ ಡಾ. ಎನ್.ಕೆ. ಶಿವಣ್ಣ ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅಕ್ರಮ-ಸಕ್ರಮ ಸಾಗುವಳಿ ಅನುಮತಿ ಪತ್ರ, ಅರಣ್ಯ ಇಲಾಖೆಯ ಆರ್.ಎಫ್.ಒ. ಮತ್ತು ಎಸ್.ಒ.ಎಫ್. ಹಾಗೂ ಕಂದಾಯ ಇಲಾಖೆಯವರಿಂದ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಆರ್.ಐ.,ವಿ.ಐ. ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನುಮತಿ, ಸೈನಿಕ ಕಲ್ಯಾಣ ಇಲಾಖೆಯ ನಿರ್ದೇಶನದ ಮಂಜೂರಾತಿ ಪತ್ರ ಕೂಡ ದೊರೆತಿದೆ. ಈ ಎಲ್ಲಾ ಪತ್ರಗಳ ನಿರ್ದೇಶನವನ್ನು ಕಡೆಗಣಿಸಿ ಏಕಾ – ಏಕಿ ಜಮೀನಿಗೆ ಬಂದು ಬದಾಮಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಜಮೀನಿಗೆ ಬಂದು ತಂತಿ ಬೇಲಿಯನ್ನು ಕಿತ್ತುಹಾಕಿ ಜಮೀನಿನಲ್ಲಿ ಇರುವ ಬೆಳೆಗಳನ್ನು ನಾಶಪಡಿಸಿರುವುದಲ್ಲದೇ ದಬ್ಬಾಳಿಕೆ ಮಾಡಿರುತ್ತಾರೆ ಎಂದು ಎಂದು ಮಾಜಿ ಸೈನಿಕ ವಿಠಲ ದ್ಯಾಮಣ್ಣ ನಿಂಬಣ್ಣವರ ತಿಳಿಸಿದ್ದಾರೆ.

1990 ರಿಂದ ಭಾರತೀಯ ಸೈನಿಕನಾಗಿ ಸೇವೆ ಸಲ್ಲಿಸಿ 20 ವರ್ಷಗಳ ಕಾಲ ಸತತ ದೇಶ ಸೇವೆಯನ್ನು ಮಾಡಿರುವ ವಿಠಲ ನಿಂಬಣ್ಣ ಅವರಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಡಾ. ಶಿವಣ್ಣ ಎನ್.ಕೆ. ನೇತೃತ್ವದಲ್ಲಿ ನಿವೃತ್ತ ಸೈನಿಕರು ಮನವಿ ಸಲ್ಲಿಸಿ 1978 ಪೂರ್ವದಿಂದಲೂ ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನು ಸಕ್ರಮಗೊಳಿಸುವಂತೆ ಅರಣ್ಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Join Whatsapp