ರೈಲ್ವೆ ಮಾಜಿ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ಮಾಜಿ ಸಂಸದ ದಿನೇಶ್ ತ್ರಿವೇದಿ ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭೆಗೆ ಕೆಲವು ವಾರಗಳಷ್ಟೇ ಇರುವಾಗ ನಡೆದಿರುವ ಈ ಪಕ್ಷಾಂತರ ಟಿಎಂಸಿಗೆ ಬಲವಾದ ಏಟು ನೀಡಿದೆ. ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ ನಂತರ ತ್ರಿವೇದಿ ಅವರು “ನಾನು ಕಾಯುತ್ತಿದ್ದ ಸುವರ್ಣ ಕ್ಷಣ ಇದು” ಎಂದು ಹೇಳಿದ್ದಾರೆ.
“ಬಂಗಾಳದಲ್ಲಿ ಹಿಂಸೆ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ಇದೆ. ಇಂದು ಬಂಗಾಳದ ಜನರು ನಿಜವಾದ ಪರಿವರ್ತನೆಗಾಗಿ ಕಾಯುತ್ತಿದ್ದಾರೆ” ಎಂದು ತ್ರಿವೇದಿ ಹೇಳಿದರು. ತ್ರಿವೇದಿಯನ್ನು ಸ್ವಾಗತಿಸಿದ ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರು ” ಸರಿಯಾದ ವ್ಯಕ್ತಿ ತಪ್ಪಾದ ಪಕ್ಷದಲ್ಲಿದ್ದರು, ಈಗ ಅವರು ಸರಿಯಾದ ಪಕ್ಷದಲ್ಲಿದ್ದಾರೆ” ಎಂದಿದ್ದಾರೆ. ತ್ರಿವೇದಿ ಫೆಬ್ರವರಿ 12 ರಂದು ತಮ್ಮ ರಾಜ್ಯಸಭೆ ಮತ್ತು ತೃಣಮೂಲ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಟಿಎಂಸಿ ಪಕ್ಷವು ಅವರನ್ನು ಮೇಲ್ಮನೆಗೆ ಕಳುಹಿಸಿತ್ತು. ಸೋತ ನಂತರವೂ ಅವರನ್ನು ಗುರುತಿಸಿ ರಾಜ್ಯಸಭೆಗೆ ಕಳಿಸಿದ್ದ ಟಿಎಂಸಿ ಪಕ್ಷಕ್ಕೆ ವಂಚಿಸಿ ತ್ರಿವೇದಿ ಈಗ ಬಿಜೆಪಿಗೆ ಹಾರಿರುವುದು ಅಚ್ಚರಿ ಮೂಡಿಸಿದೆ.