ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಇನ್ನಿಲ್ಲ

Prasthutha|

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಸಿಪಿಐಎಂ ಪಕ್ಷದಿಂದ ಎರಡು ಬಾರಿ ಶಾಸಕರಾಗಿದ್ದ ಕಾಮ್ರೆಡ್ ಜಿ.ವಿ.ಶ್ರೀರಾಮರೆಡ್ಡಿ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.

- Advertisement -

ಬೆಳಗ್ಗೆ 4 ಗಂಟೆಗೆ ಶ್ರೀರಾಮರೆಡ್ಡಿ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ತಕ್ಷಣ ಅವರನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಲಾಯಿತು ಆದರೆ, ಚಿಕಿತ್ಸೆ ಫಲಿಸದೇ ಬೆಳಗ್ಗೆ 7.28ಕ್ಕೆ ಮೃತಪಟ್ಟಿರುವುದಾಗಿ ತಾಲೂಕು ವೈದ್ಯಾಧಿಕಾರಿಗಳು ತಿಳಿಸಿದರು.

ಪ್ರಗತಿಪರ ಶಾಸಕರೆಂದೇ ಖ್ಯಾತಿಯಾಗಿದ್ದ ಅವರು ಇತ್ತೀಚೆಗೆ ಸಿಪಿಐಎಂ ಪಕ್ಷ ತೊರೆದು ತಮ್ಮದೆ ಪ್ರಜಾ ಸಂಘರ್ಷ ಸಮಿತಿ ಸ್ಥಾಪನೆ ಮಾಡಿದ್ದರು.

- Advertisement -

ಬಾಗೇಪಲ್ಲಿಯಲ್ಲಿ ಸಿಪಿಎಂ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಿದ್ದ ಶ್ರೀರಾಮ ರೆಡ್ಡಿ ಅವರು,1999, 2004ರಲ್ಲಿ ಬಾಗೇಪಲ್ಲಿಯಿಂದ ಸಿಪಿಎಂ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಎರಡು ವರ್ಷದ ಹಿಂದೆ ಪಕ್ಷದ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡ ಆರೋಪದ ಮೇಲೆ ಜಿ.ವಿ ಶ್ರೀರಾಮ ರೆಡ್ಡಿ ಅವರನ್ನು ಸಿಪಿಎಂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿತ್ತು. ಆದರೂ ಧೃತಿಗೆಡದ ಜಿ.ವಿ ಶ್ರೀರಾಮ ರೆಡ್ಡಿ ಅವರು ಜನರನ್ನು ಸಂಘಟಿಸಿ ಹಲವು ಹೋರಾಟಗಳನ್ನು ರೂಪಿಸಿದ್ದರು.

ಅವರ ನಿಧನಕ್ಕೆ ಹಲವು ಮುಖಂಡರು ಸಂತಾಪ ಸೂಚಿಸಿದ್ದಾರೆ.

ಸಿದ್ದರಾಮಯ್ಯ ಸಂತಾಪ

ಸಿಪಿಎಂ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ‌ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಬಡವರು, ಕಾರ್ಮಿಕರು ಮತ್ತು ರೈತರ ಪರ ಹೋರಾಟಕ್ಕೆ ಜೀವನವನ್ನೇ ಮುಡಿಪಾಗಿಟ್ಟಿದ್ದ ರೆಡ್ಡಿಯವರು ಇತ್ತೀಚಿನ ವರ್ಷಗಳಲ್ಲಿ‌ ಕೋಮುವಾದದ ವಿರುದ್ದದ ಗಟ್ಟಿದನಿಯಾಗಿದ್ದರು. ಇತ್ತೀಚೆಗೆ ಜಾತ್ಯತೀತ ಶಕ್ತಿಗಳ ಸಂಘಟನೆಗೆ ಪ್ರಯತ್ನ ನಡೆಸುತ್ತಿದ್ದ ಜಿ.ವಿ.ಶ್ರೀರಾಮ ರೆಡ್ಡಿ ಸಾವಿನಿಂದ ರಾಜ್ಯ ಒಬ್ಬ ಧೀಮಂತ ಹೋರಾಟಗಾರನನ್ನು ಮತ್ತು ವೈಯಕ್ತಿಕವಾಗಿ ನಾನು ಬಹುಕಾಲದ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಅವರ ಕುಟುಂಬದ ಸದಸ್ಯರ‌ ಮತ್ತು ಅನುಯಾಯಿಗಳ‌ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ, ಪ್ರಗತಿಪರ ಚಿಂತಕರು, ಕೃಷಿ-ಕಾರ್ಮಿಕರ ಪರ ಹೋರಾಟಗಾರರು ಹಾಗೂ ಮಾಜಿ ಶಾಸಕರಾದ ಕಾಮ್ರೇಡ್‌ ಜಿ.ವಿ.ಶ್ರೀರಾಮರೆಡ್ಡಿ ಅವರ ನಿಧನದ ಸುದ್ದಿ ನನಗೆ ತೀವ್ರ ದುಃಖ ಉಂಟು ಮಾಡಿದೆ. ಸಿಪಿಎಂ (ಐ) ಪಕ್ಷದಿಂದ ಎರಡು ಬಾರಿ ಬಾಗೇಪಲ್ಲಿ ಕ್ಷೇತ್ರದಿಂದ ಆಯ್ಕೆ ಆಗಿದ್ದ ಅವರು, ಮಾದರಿ ಜನಪ್ರತಿನಿಧಿಯಷ್ಟೇ ಅಲ್ಲ, ಅತ್ಯುತ್ತಮ ಸಂಸದೀಯ ಪಟುವೂ ಹೌದು. ಶ್ರೀರಾಮರೆಡ್ಡಿ ಅವರ ಅಗಲಿಕೆಯಿಂದ ರಾಜ್ಯದಲ್ಲಿ ನಡೆಯುತ್ತಿರುವ ವೈಚಾರಿಕಪರ ಹೋರಾಟದಲ್ಲಿ ದೊಡ್ಡ ಶೂನ್ಯವನ್ನೇ ಸೃಷ್ಟಿಸಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿ ಅವರ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

Join Whatsapp