ಸಾಲ ನೀಡಿಕೆಯಲ್ಲಿ ಅವ್ಯವಹಾರ: ಐಸಿಐಸಿಐ ಬ್ಯಾಂಕಿನ ಮಾಜಿ ಸಿಇಓ ಚಂದಾ, ಪತಿ ಬಂಧನ

Prasthutha|

ನವದೆಹಲಿ: ಖಾಸಗಿ ವಲಯದ ಐಸಿಐಸಿಐ ಬ್ಯಾಂಕಿನ ಮಾಜಿ ಸಿಇಓ ಚಂದಾ ಕೋಚಾರ್ ಮತ್ತು ಅವರ ಪತಿ ದೀಪಕ್ ಕೋಚಾರ್ ಅವರನ್ನು ವೀಡಿಯೋಕಾನ್ ಗ್ರೂಪಿಗೆ ನೀಡಿದ ರೂ. 3,000 ಕೋಟಿ ರೂಪಾಯಿ ಸಾಲದ ಅವ್ಯವಹಾರ ಸಂಬಂಧ ಶುಕ್ರವಾರ ಸಂಜೆ ಸಿಬಿಐ ಬಂಧಿಸಿದೆ.

- Advertisement -


ಚಂದಾ ಕೋಚಾರ್ ಅವರು ನಾಲ್ಕು ವರ್ಷಗಳ ಹಿಂದೆ ಐಸಿಐಸಿಐ ಬ್ಯಾಂಕಿನ ಸಿಇಓ ಮತ್ತು ಆಡಳಿತ ನಿರ್ದೇಶಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ವೀಡಿಯೋಕಾನ್ ಗುಂಪಿಗೆ ಸಾಲ ನೀಡುವಲ್ಲಿ ವಶೀಲಿಬಾಜಿ ನಡೆಸಿದ್ದನ್ನು ನಿರಾಕರಿಸಿದ್ದರು.


ಎಲೆಕ್ಟ್ರಾನಿಕ್ಸ್ ಮತ್ತು ಪೆಟ್ರೋಲಿಯಂ ಪರಿಶೋಧನಾ ಸಂಸ್ಥೆ ವೀಡಿಯೋಕಾನ್ ಗುಂಪಿಗೆ ಸಾಲ ನೀಡುವಲ್ಲಿ ಸ್ವಹಿತಾಶಕ್ತಿ ವಹಿಸಿದ್ದರು ಎಂಬ ಆರೋಪ ಬಂದಾಗ ಚಂದಾ ಕೋಚಾರ್ ಅವರು 2018ರ ಅಕ್ಟೋಬರ್’ನಲ್ಲಿ ಬ್ಯಾಂಕಿನ ಸಿಇಓ ಮತ್ತು ಆಡಳಿತ ನಿರ್ದೇಶಕಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

- Advertisement -


ಬ್ಯಾಂಕಿನ ನಿಯಮಾವಳಿಯನ್ನು ಉಲ್ಲಂಘಿಸಿದ್ದಾರೆ ಎಂದು ಚಂದಾ ಅವರ ರಾಜೀನಾಮೆಯನ್ನು ವಜಾ ಶಿಕ್ಷೆ ಎಂದು ಬ್ಯಾಂಕು ಹೇಳಿತ್ತು.
2012ರಲ್ಲಿ ವೀಡಿಯೋಕಾನ್ ಗ್ರೂಪಿಗೆ ಐಸಿಐಸಿಐ ಬ್ಯಾಂಕು ರೂ. 3,250 ಕೋಟಿ ರೂಪಾಯಿ ಸಾಲ ನೀಡಿದ್ದು, ಅದು ಚಾಲ್ತಿರಹಿತ ಸಂಪತ್ತಾದುದರಲ್ಲಿ ಚಂದಾ ಅವರು ವಂಚನೆ ನಡೆಸಿ ಕ್ರಿಮಿನಲ್ ವ್ಯವಹಾರ ನಡೆಸಿದ್ದರು ಎಂದು ಸಿಬಿಐ ಆರೋಪ ಹೊರಿಸಿತ್ತು.


ಈ ವ್ಯವಹಾರದಲ್ಲಿ ಚಂದಾ ಕೋಚಾರ್ ಅವರ ಗಂಡ ದೀಪಕ್ ಕೋಚಾರ್ ಮತ್ತು ಕುಟುಂಬದವರು ಲಾಭ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.
ವೀಡಿಯೋಕಾನ್ ಚೇರ್ಮನ್ ವೇಣುಗೋಪಾಲ್ ದೂತ್ ಅವರು ದೀಪಕ್ ಕೋಚಾರ್ ಆರಂಭಿಸಿದ್ದ ನ್ಯೂಪವರ್ ರಿನೇವೋಬಲ್ಸ್ ಕಂಪೆನಿಯಲ್ಲಿ ಹೂಡಿಕೆ ಮಾಡಲು ಬ್ಯಾಂಕಿನಿಂದ ಪಡೆದಿದ್ದ ಸಾಲ ಬಳಸಿದ್ದರು ಎಂದು ಆರೋಪಿಸಲಾಗಿದೆ.


ಆ ಸಾಲವನ್ನು ಚಂದಾ ಕೋಚಾರ್ ಅಧ್ಯಕ್ಷತೆಯ ಬ್ಯಾಂಕು ಸಮಿತಿಯು ಚಾಲ್ತಿರಹಿತ ಖಾತೆ ಎಂದು ರೈಟ್ ಆಫ್ ಮಾಡಿತ್ತು. ಚಂದಾ ಅವರು ತಮ್ಮ ಹುದ್ದೆಯ ಬಲವನ್ನು ದುರುಪಯೋಗಿಸಿ ಅಡ್ಡ ದಾರಿಯ ಲಾಭ ಪಡೆದರು ಎಂದು ಆರೋಪ ಹೊರಿಸಲಾಗಿತ್ತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಕ್ಕೂಟದ 20 ಬ್ಯಾಂಕುಗಳಲ್ಲಿ ವೀಡಿಯೋಕಾನ್ 40,000 ಕೋಟಿ ರೂಪಾಯಿ ಸಾಲವನ್ನೂ ಪಡೆದಿತ್ತು. ಅದನ್ನೂ ಚಂದಾರ ಗಂಡನ ಕಂಪೆನಿಯ ಹೂಡಿಕೆಗೆ ಬಳಸಿರುವುದಾಗಿ ಆಪಾದಿಸಲಾಗಿದೆ.


ಚಂದಾ ಕೋಚಾರ್ ಕಳೆದ ಕಾಲು ಶತಮಾನದಲ್ಲಿ ಭಾರತದಲ್ಲಿ ಅತಿ ಹೆಚ್ಚು ಸಾಲ ನೀಡಿದ ಮೂರನೇ ಸ್ಥಾನದ ಬ್ಯಾಂಕಿನ ಮುಖ್ಯಸ್ಥೆಯಾಗಿದ್ದು ತುಂಬ ಪ್ರಭಾವಿಯಾಗಿದ್ದರು. ಯಾವುದೇ ನಿಯಮಾವಳಿ ಮೀರಿ ಸಾಲ ನೀಡಿಲ್ಲ ಎಂಬುದು ಚಂದಾ ವಾದವಾಗಿದೆ.

Join Whatsapp