ಪಾಕಿಸ್ತಾನಕ್ಕೆ ಸೇನಾ ಮಾಹಿತಿ ರವಾನೆ : ಸೇನೆಯ ಮಾಜಿ ಸಿಬ್ಬಂದಿ ಶೈಲೇಂದ್ರ ಸಿಂಗ್ ಚೌಹಾಣ್ ಬಂಧನ

Prasthutha|

ಲಕ್ನೋ: ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‍ಐಗೆ ಸೇನೆಯ ಚಲನವಲನದ ಮಾಹಿತಿ ರವಾನಿಸಿದ ಆರೋಪದ ಮೇಲೆ ಸೇನೆಯಲ್ಲಿ ತಾತ್ಕಾಲಿಕ ಸೇವೆ ಸಲ್ಲಿಸಿದ್ದ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ.

- Advertisement -

ಬಂಧಿತ ಆರೋಪಿಯನ್ನು ಶೈಲೇಂದ್ರ ಸಿಂಗ್ ಚೌಹಾಣ್ ಎಂದು ಗುರುತಿಸಲಾಗಿದೆ. ಆತ ಅರುಣಾಚಲ ಪ್ರದೇಶದಲ್ಲಿ ಸೇನೆಯಲ್ಲಿ ಸುಮಾರು ಒಂಬತ್ತು ತಿಂಗಳ ಕಾಲ ತಾತ್ಕಾಲಿಕ ಸಿಬ್ಬಂದಿಯಾಗಿ ಕೆಲಸ ಮಾಡಿದ್ದಾನೆ. ಈ ಬಗ್ಗೆ ಲಕ್ನೋದಲ್ಲಿ ಅಧಿಕಾರಿಗಳು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಬಂಧಿತ ಆರೋಪಿ ಸೇನಾ ವಾಹನಗಳು ಇರುವ ಸ್ಥಳ ಮತ್ತು ಚಲನವಲನಕ್ಕೆ ಸಂಬಂಧಿಸಿದ ಸೇನೆಯ ಮಾಹಿತಿಯನ್ನು, ಛಾಯಾಚಿತ್ರಗಳನ್ನು ಐಎಸ್‍ಐಗೆ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆತನನ್ನು ವಿಚಾರಣೆಗಾಗಿ ಲಕ್ನೋದ ಎಟಿಎಸ್ ಪ್ರಧಾನ ಕಚೇರಿಗೆ ಕರೆಸಲಾಗಿದೆ. ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ವಾಟ್ಸಾಪ್ ಮತ್ತು ಫೇಸ್‍ಬುಕ್ ಮೂಲಕ ಸೇನೆಗೆ ಸಂಬಂಧಿಸಿದ ಮಾಹಿತಿಯನ್ನು ಆರೋಪಿ ಹಂಚಿಕೊಂಡಿದ್ದಾನೆ ಎಂಬುದು ದೃಢಪಟ್ಟಿದೆ. ನಕಲಿ ಗುರುತಿನೊಂದಿಗೆ ಐಎಸ್‍ಐಗಾಗಿ ಕೆಲಸ ಮಾಡುತ್ತಿದ್ದ ಹರ್ಲೀನ್ ಕೌರ್ ಎಂಬ ಮಹಿಳೆಯೊಂದಿಗೆ ಸಿಂಗ್ ಫೇಸ್‍ಬುಕ್ ಮೂಲಕ ಸಂಪರ್ಕದಲ್ಲಿದ್ದಾನೆ. ಅಲ್ಲದೇ ಮತ್ತೋರ್ವ ಐಎಸ್‍ಐ ಏಜೆಂಟ್ ಜೊತೆ ಕೂಡ ಸಂಪರ್ಕದಲ್ಲಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



Join Whatsapp