ಮಣಿಪುರದಲ್ಲಿ 5 ದಿನ ಇಂಟರ್ನೆಟ್ ಸೇವೆ ನಿಷೇಧ; ಶಾಲೆಗೆ ರಜೆ ಘೋಷಣೆ

Prasthutha|

ಇಂಫಾಲ್: ಇಬ್ಬರು ವಿದ್ಯಾರ್ಥಿಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ನಂತರ ರಾಜ್ಯದಲ್ಲಿ ಹೊಸ ಪ್ರತಿಭಟನೆಗಳು ಭುಗಿಲೆದ್ದಿದ್ದು ಮಣಿಪುರ ಮಂಗಳವಾರ ಮತ್ತೊಮ್ಮೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಐದು ದಿನಗಳ ಕಾಲ ಸ್ಥಗಿತಗೊಳಿಸಿದೆ.

- Advertisement -

 ಸಂತ್ರಸ್ತರಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಮಂಗಳವಾರ ನೂರಾರು ವಿದ್ಯಾರ್ಥಿಗಳು ಬೀದಿಗಿಳಿದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ನಿವಾಸದ ಕಡೆಗೆ ಮೆರವಣಿಗೆ ನಡೆಸಿದರು. ಇಬ್ಬರು ವಿದ್ಯಾರ್ಥಿಗಳ ಮೃತದೇಹದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಇಲ್ಲಿ ಪರಿಸ್ಥಿತಿ ಹದಗೆಟ್ಟಿದೆ.

ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳಿಗೆ ಇಂದು (ಸೆಪ್ಟೆಂಬರ್ 27)ಯಿಂದ ಸೆಪ್ಟೆಂಬರ್ 29(ಶುಕ್ರವಾರ) ವರೆಗೆ ರಜೆ ಘೋಷಿಸಲಾಗಿದೆ. ಈಗಿರುವ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ದೃಷ್ಟಿಯಿಂದ ಮತ್ತು ತಪ್ಪು ಮಾಹಿತಿ, ಸುಳ್ಳು ವದಂತಿಗಳು ಮತ್ತು ಇತರ ಹಿಂಸಾತ್ಮಕ ಚಟುವಟಿಕೆಗಳ ಹರಡುವಿಕೆಯನ್ನು ತಡೆಯುವ ಪ್ರಯತ್ನದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

“ರಾಜ್ಯ ಸರ್ಕಾರವು ಅಕ್ಟೋಬರ್ 10 ರ ಸಂಜೆ 7:45 ರವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಐದು ದಿನಗಳ ಕಾಲ ಮಣಿಪುರ ರಾಜ್ಯದ ಪ್ರಾದೇಶಿಕ ವ್ಯಾಪ್ತಿಯಲ್ಲಿ VPN ಮೂಲಕ ಮೊಬೈಲ್ ಇಂಟರ್ನೆಟ್ ಡೇಟಾ ಸೇವೆಗಳು, ಇಂಟರ್ನೆಟ್ / ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲು / ನಿಗ್ರಹಿಸಲು ನಿರ್ಧರಿಸಿದೆ” ಎಂದು ಸುತ್ತೋಲೆ ಹೇಳಿದೆ.

ಮೇ ತಿಂಗಳಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ನಂತರ ಸುಮಾರು ಐದು ತಿಂಗಳ ನಿಷೇಧದ ನಂತರ ರಾಜ್ಯದಲ್ಲಿ ಇಂಟರ್ನೆಟ್ ಸೇವೆಗಳನ್ನು ಇತ್ತೀಚೆಗೆ ಪುನಃಸ್ಥಾಪಿಸಲಾಗಿತ್ತು.