ಸಂಘಪರಿವಾರದ ಗೂಂಡಾಗಿರಿ ಉತ್ತರ ಭಾರತವನ್ನು ನೆನಪಿಸುತ್ತಿದೆ | ದಕ್ಷಿಣ ಕನ್ನಡಕ್ಕೆ ವಿಶೇಷ ಟಾಸ್ಕ್ ಫೋರ್ಸ್ ರಚಿಸಿ : ಎಸ್ಡಿಪಿಐ ಒತ್ತಾಯ

Prasthutha|

ಮಂಗಳೂರು : ಕಳೆದ ಹಲವಾರು ಸಮಯದಿಂದ ಶಾಂತಿಯಿಂದಿದ್ದ ದ.ಕ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಹಿಂದುತ್ವ ಸಂಘಟನೆಯ ಸಮಾಜ ವಿರೋಧಿ ಶಕ್ತಿಗಳು ತಲೆ ಎತ್ತುತ್ತಿದ್ದು, ಜನ ಸಾಮಾನ್ಯರಿಗೆ ಅದರಲ್ಲೂ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ನಿರ್ಭೀತಿಯಿಂದ ಸಂಚರಿಸಲು ಸಂಘಪರಿವಾರದ ಗೂಂಡಾ ಪಡೆಗಳು ಅವಕಾಶ ನೀಡುತ್ತಿಲ್ಲ. ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆಗಳು ನಿರಂತರವಾಗಿ ನಡೆಯುತ್ತಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇಂತಹ ದುಷ್ಟ ಕೂಟವನ್ನು ಹೆಡೆಮುರಿ ಕಟ್ಟಲು ಕೂಡಲೇ ದ.ಕ ಜಿಲ್ಲೆಗೆ ವಿಶೇಷ ಟಾಸ್ಕ್ ಪೋರ್ಸ್ ರಚಿಸಬೇಕೆಂದು ಎಸ್‌ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಒತ್ತಾಯಿಸಿದ್ದಾರೆ.

ಕಳೆದ ವಾರ ಸುರತ್ಕಲ್‌ನಲ್ಲಿ ಸಹಪಾಠಿಗಳು ಒಂದೇ ಬಸ್ಸಿನಲ್ಲಿ ಸಂಚರಿಸಿದ್ದಾರೆ ಎಂಬ ನೆಪವೊಡ್ಡಿ ವಿದ್ಯಾರ್ಥಿಯೊಬ್ಬನಿಗೆ ದುಷ್ಕರ್ಮಿಗಳು ಗುಂಪು ಹಲ್ಲೆ ನಡೆಸಿದ್ದಾರೆ. ಅನಂತರ ಬುಧವಾರ ರಾತ್ರಿ ಬೆಳ್ತಂಗಡಿಯಲ್ಲಿ ಪಿಕ್‌ಅಪ್ ವಾಹನದಲ್ಲಿ ಹೋಗುತ್ತಿದ್ದ ರಹೀಂ ಹಾಗೂ ಮುಸ್ತಫ ಎಂಬ ಇಬ್ಬರು ಅಮಾಯಕರ ಮೇಲೆ ಬೆಳ್ತಂಗಡಿ ಶಾಸಕರ ಗೂಂಡಾಪಡೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದಾರೆ. ದಾಳಿಗೊಳಗಾದ ಆ ಇಬ್ಬರು ವ್ಯಕ್ತಿಗಳ ಮೇಲೆ ತೀವ್ರ ರೂಪದ ದಾಳಿಯಾಗಿದ್ದು ಕಬ್ಬಿಣದ ರಾಡ್, ದೊಣ್ಣೆ ಹಾಗೂ ಕಲ್ಲುಗಳನ್ನು ಬಳಸಿ ದುಷ್ಕರ್ಮಿಗಳು ಅವರ ಮೇಲೆ ಮಾರಾಂಣಾತಿಕ ಹಲ್ಲೆಗೈದಿದ್ದು ಇದರಿಂದಾಗಿ ಅವರ ದೇಹದ ಬಹುತೇಕ ಬಾಗದಲ್ಲಿ ರಕ್ತವು ಹೆಪ್ಪುಗಟ್ಟಿದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ. ಆ ಅಮಾನವೀಯ ಘಟನೆ ನಡೆದು 24 ಗಂಟೆಗಳ ಒಳಗಾಗಿ ಮಂಗಳೂರಿನ ಪಂಪ್‌ವೆಲ್ ಸಮೀಪ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಅನ್ವರ್ ಮುಹಮ್ಮದ್ ಎಂಬ ಯುವಕನನ್ನು ಏಳೆಂಟು ಮಂದಿಯಿದ್ದ ಸಂಘಪರಿವಾರದ ಪುಂಡರ ಗುಂಪೊಂದು ಬಸ್ಸಿನಿಂದ ಎಳೆದು ಹೊರಗೆ ಹಾಕಿ ಬಸ್ಸಿನಲ್ಲಿದ್ದ ಪ್ರಯಾಣಿಕರ ಎದುರೇ ಮನಸ್ಸೋ ಇಚ್ಚೊ ತೀವ್ರವಾಗಿ ಗುಂಪು ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಯುವಕನನ್ನು ಇದೀಗ ಖಾಸಗೀ ಆಸ್ಪತ್ರೆಯಲ್ಲಿ ತೀರ್ವ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.

- Advertisement -

ಕಳೆದ ಕೆಲವು ದಿನಗಳ ಹಿಂದೆ ಬಂಟ್ವಾಳದಲ್ಲಿ ವಿಭಿನ್ನ ಕೋಮಿನ ಯುವಕ ಯುವತಿ ಬಸ್ಸಿನಲ್ಲಿ ಇದ್ದಾರೆ ಎಂಬ ಕಾರಣವೊಡ್ಡಿ ಅವರನ್ನು ಬಜರಂಗದಳದ ಪುಂಡರು ಬಸ್ಸಿನಿಂದ ಇಳಿಸಿದ್ದಾರೆ. ದ.ಕ ಜಿಲ್ಲೆಯಲ್ಲಿ ಕಳೆದ ಹಲವಾರು ಸಮಯದಿಂದ ಇಂತಹ ವ್ಯವಸ್ಥಿತ ದಾಳಿಗಳು ನಡೆಯುತ್ತಿದ್ದು ಇದನ್ನು ಗಮನಿಸಿದಾಗ ಉತ್ತರ ಪ್ರದೇಶ, ಜಾರ್ಖಂಡ್ ನಂತಹ ರಾಜ್ಯಗಳಲ್ಲಿ ನಡೆಯುವ ಗುಂಪು ಹತ್ಯೆ, ಗುಂಪು ಹಲ್ಲೆಗಳನ್ನು ನೆನಪಿಸುವಂತಿದೆ.

ಇಂತಹ ವ್ಯವಸ್ಥಿತ ಹಲ್ಲೆಗಳನ್ನು ಮಾಡುವ ವ್ಯಕ್ತಿಗಳನ್ನು ಹಾಗೂ ಅದರ ಸಂಘಟನೆಯ ಮುಖಂಡರನ್ನು , ಇದರ ಹಿಂದಿರುವ ಮಾಸ್ಟರ್ ಮೈಂಡ್ ಗಳನ್ನು ಪೊಲೀಸ್ ಇಲಾಖೆ ಕೂಡಲೇ ಬಂಧಿಸಿ ಕಠಿಣ ಸೆಕ್ಷನ್ ಗಳನ್ನು ಹಾಕಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದು ಅದರ ಸಚಿವರು ಹಾಗೂ ಶಾಸಕರು ತಮ್ಮ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಪ್ರಚೋದಿಸುವ ರೀತಿಯಲ್ಲಿ ಭಾಷಣಗಳು ಹಾಗೂ ಹೇಳಿಕೆಗಳು ನೀಡುತ್ತಿರುವುದೇ ಇಂತಹ ಘಟನೆಗಳಿಗೆ ಪ್ರಮುಖ ಕಾರಣವಾಗಿರುತ್ತದೆ. ಈಗಾಗಲೇ ಎಸ್‌ಡಿಪಿಐ ಅಂತಹ ಮುಖಂಡರ ವಿರುದ್ಧ ಜಿಲ್ಲೆಯ ಹಲವಾರು ಠಾಣೆಗಳಲ್ಲಿ ದೂರನ್ನು ನೀಡಿದ್ದು, ಪೊಲೀಸರು ಕೇಸು ದಾಖಲಿಸಲು ಮೀನ ಮೇಷ ಎಣಿಸುತ್ತಿರುವುದು ಅವರ ಅನುಯಾಯಿಗಳಿಗೆ ಗೂಂಡಾಗಿರಿ ಮಾಡಲು ಪ್ರಚೋದನೆಯಾಗುತ್ತದೆ.

ಮಾನ್ಯ ದ.ಕ.ಜಿಲ್ಲಾಧಿಕಾರಿಗಳು ,ಮಂಗಳೂರು ನಗರ ಪೊಲೀಸ್ ಆಯುಕ್ತರು ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಜಿಲ್ಲೆಯಲ್ಲಿ ನಡೆಯುವ ಇಂತಹ ಅಹಿತಕರ ಘಟನೆಯನ್ನು ತಡೆದು ಸಮಾಜ ವಿರೋದಿ ಶಕ್ತಿಗಳನ್ನು ಹೆಡೆಮುರಿ ಕಟ್ಟಿ ಹದ್ದು ಬಸ್ತಿನಲ್ಲಿಡಲು ಜಿಲ್ಲೆಗೆ ವಿಶೇಷ ಟಾಸ್ಕ್ ಪೋರ್ಸನ್ನು ರಚಿಸಬೇಕು. ಇಲ್ಲದಿದ್ದಲ್ಲಿ ಇಂತಹ ದುಷ್ಕ್ರತ್ಯದ ವಿರುದ್ದ ಜನ ರೊಚ್ಚಿಗೆದ್ದರೆ ಆಗಬಹುದಾದ ಎಲ್ಲಾ ಅನಾಹುತಗಳಿಗೆ ಸರಕಾರ ಹಾಗೂ ಜಿಲ್ಲಾಡಳಿತ ನೇರ ಹೊಣೆಯಾಗಲಿದೆ ಎಂದು ಎಸ್‌ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಎಚ್ಚರಿಕೆ ನೀಡಿದ್ದಾರೆ.

- Advertisement -