ಆಫ್ರಿಕಾ ಪ್ರಜೆಗೆ ಇರಿದು ಕೊಲೆ: ವಿದೇಶಿಗನ ಸುಳಿವು ಪತ್ತೆ

Prasthutha|

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳದಲ್ಲಿ ಚಾಕುವಿನಿಂದ ಇರಿದು ವಿದೇಶಿ ಪ್ರಜೆಯನ್ನು ಕೊಲೆಗೈದು ಪರಾರಿಯಾಗಿರುವ ಮತ್ತೊಬ್ಬ ವಿದೇಶಿ ಪ್ರಜೆಯ ಸುಳಿವು ಪತ್ತೆಯಾಗಿದ್ದು ಆತನ ಬಂಧನಕ್ಕೆ ಬಾಣಸವಾಡಿ ಪೊಲೀಸರು ಶೋಧ ಕೈಗೊಂಡಿದ್ದಾರೆ.

- Advertisement -

ಆಫ್ರಿಕನ್ ಪ್ರಜೆ ವಿಕ್ಟರ್ (35) ಕೊಲೆಯಾದ ವ್ಯಕ್ತಿ. ನಿನ್ನೆ ರಾತ್ರಿ 10ರ ವೇಳೆ ಸ್ನೇಹಿತನೇ ಆಗಿದ್ದ ಮತ್ತೊಬ್ಬ ವಿದೇಶಿ ಪ್ರಜೆ ಜೊತೆ ಕುಳ್ಳಪ್ಪ ಸರ್ಕಲ್ ಬಳಿ ಒಟ್ಟಿಗೆ ನಡೆದುಕೊಂಡು ಬರುತ್ತಿದ್ದಾಗ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ.

ಜಗಳವು ವಿಕೋಪಕ್ಕೆ ತಿರುಗಿದಾಗ ವಿಕ್ಟರ್ ನನ್ನು ಆರೋಪಿ ಸ್ನೇಹಿತ ಚಾಕುವಿನಿಂದ ಹೊಟ್ಟೆ ಹಾಗೂ ಎದೆ ಭಾಗಕ್ಕೆ ತಿವಿದು ಪರಾರಿಯಾಗಿದ್ದ. ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದಿದ್ದ ಆತನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ  ಸಾವನ್ನಪ್ಪಿದ್ದಾನೆ. ಕೊಲೆಯಾದ ವ್ಯಕ್ತಿ ವಿಕ್ಟರ್ ಕಳೆದ ಮೂರು ವರ್ಷಗಳ ಹಿಂದೆ ನಗರದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದು, ದಂಪತಿಗೆ ಎರಡೂವರೆ ವರ್ಷದ ಮಗುವಿದೆ.

- Advertisement -

ಆರೋಪಿ ಕೂಡ ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದು ಆತನ ಸುಳಿವು ಪತ್ತೆಹಚ್ಚಿ ಬಂಧನ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ. ಕೃತ್ಯ ನಡೆದ ಸ್ಥಳಕ್ಕೆ ಸುದ್ದಿ ತಿಳಿದ ತಕ್ಷಣವೇ ಧಾವಿಸಿದ ಬಾಣಸವಾಡಿ ಪೊಲೀಸರು ಕೊಲೆಯಾದ ವಿಕ್ಟರ್ ಮೊಬೈಲ್ ವಶಕ್ಕೆ ಪಡೆದು ಹೊರ ಹೋಗುವ ಹಾಗೂ ಒಳಬರುವ  ಕರೆಗಳ ಮಾಹಿತಿ ಕಲೆ ಹಾಕಿ  ಅನುಮಾನಾಸ್ಪದ ನಂಬರ್ ಗಳ ನೆಟ್ ವರ್ಕ್ ಡಂಪ್ ತೆಗೆಯಲು ಮುಂದಾಗಿದ್ದು, ವಿಕ್ಟರ್ ಕುಟುಂಬಸ್ಥರ ಬಳಿಯು ಮಾಹಿತಿ ಕಲೆ ಹಾಕಿ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.



Join Whatsapp