ಮಂಗಳೂರು: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಕ್ಯಾನಿಂಗ್ ಸೆಂಟರ್’ಗಳು ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಸಲಹೆ ನೀಡಿದ್ದಾರೆ.
ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗಪತ್ತೆ ತಂತ್ರ ವಿಧಾನಗಳ ನಿಷೇಧ (ಪಿ.ಸಿ. ಆ್ಯಂಡ್ ಪಿ.ಎನ್.ಡಿ.ಟಿ.) ಕಾಯ್ದೆ ಅನುಷ್ಠಾನದ ಕುರಿತು ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮಾಡುವುದು ಹಾಗೂ ಸ್ಕ್ಯಾನಿಂಗ್ ಸಂಸ್ಥೆಯವರು ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಕಾಯ್ಡೆ ಕಾನೂನನ್ನು ಅನುಷ್ಠಾನಗೊಳಿಸದೆ ಇರುವುದು ಶಿಕ್ಷಾರ್ಹ ಅಪರಾಧ, ಪುರುಷ ಹಾಗೂ ಮಹಿಳೆಯರ ಸಮಾನ ಅನುಪಾತ ಕಾಪಾಡುವ ದೃಷ್ಟಿಯಿಂದ ಈ ಕಾಯ್ದೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿ ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿರುವ ಸ್ಕ್ಯಾನಿಂಗ್ ಸಂಸ್ಥೆಗಳನ್ನು 3 ತಿಂಗಳಿಗೊಮ್ಮೆ ಭೇಟಿ ಮಾಡಿ ತಪಾಸಣೆ ಹಾಗೂ ಮೇಲ್ವಿಚಾರಣೆ ನಡೆಸಬೇಕು. ಪಿ.ಸಿ. ಆ್ಯಂಡ್ ಪಿ.ಎನ್.ಡಿ.ಟಿ. ಕಾಯ್ದೆಯನ್ನು ಅನುಷ್ಠಾನ ಮಾಡದ
ಸಂಸ್ಥೆಗಳಿಗೆ ನೊಟೀಸ್ ನೀಡುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷೆ ಡಾ. ವತ್ಸಲಾ ಕಾಮತ್, ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರಾದ ಡಾ. ದೀಪಾ ಪ್ರಭು ಕೆ.ಪಿ., ಸದಸ್ಯರಾದ ಡಾ. ಅಮೃತ ಭಂಡಾರಿ, ಡಾ. ಸುಂದರಿ, ಡಾ. ಶೈಲಜಾ, ಡಾ. ಅನಿತ್ರಾಜ್, ವಕೀಲರಾದ ಚಂದ್ರಹಾಸ್, ಎನ್.ಜಿ.ಒ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.