ಫುಟ್‌ಬಾಲ್‌ ದಂತಕಥೆ ಬ್ರೆಜಿಲ್‌ನ ಪೆಲೆ ನಿಧನ

Prasthutha|

 ಫುಟ್‌ಬಾಲ್‌ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ, ಮೂರು ಬಾರಿ ವಿಶ್ವಕಪ್‌ ವಿಜೇತ, ಪೆಲೆ ಎಂದೇ ಖ್ಯಾತರಾಗಿದ್ದ ಬ್ರೆಜಿಲ್‌ನ ಎಡ್ಸನ್‌ ಅರಾಂಟೆಸ್‌ ಡು ನಸಿಮೆಂಟೊ (82), ಸಾವ್‌ಪಾಲೋದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

- Advertisement -

ಕಳೆದೊಂದು ವರ್ಷದಿಂದ ದೊಡ್ಡ ಕರುಳಿನ ಕ್ಯಾನ್ಸರ್‌ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಪೆಲೆ ಅವರನ್ನು ನವೆಂಬರ್‌ 29ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯದ ಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು. ಪೆಲೆ ಮೃತಪಟ್ಟ ವಿವರವನ್ನು ಅವರ ಏಜೆಂಟ್‌ ಜೊಯ್‌ ಫ್ರಗಾ ಮತ್ತು ಕುಟುಂಬಸ್ಥರು ಗುರುವಾರ ರಾತ್ರಿ ದೃಢಪಡಿಸಿದ್ದಾರೆ. ʻನಾವೆಲ್ಲರೂ ನಿಮಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ನಿಮ್ಮನ್ನು ಅನಂತವಾಗಿ ಪ್ರೀತಿಸುತ್ತೇವೆ. ರೆಸ್ಟ್‌ ಇನ್‌ ಪೀಸ್‌ ಎಂದು ಪುತ್ರಿ ನಾಸಿಮೆಂಟೊ, ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಬ್ರೆಜಿಲ್‌ ಮತ್ತು ಸಾಂಟೋಸ್‌ ಕ್ಲಬ್‌ ಪರವಾಗಿ ಆಡಿದ್ದ ಪೆಲೆ, ಎರಡೂ ದಶಕಗಳಿಗೂ ಹೆಚ್ಚುಕಾಲ ಫುಟ್‌ಬಾಲ್‌ ಮೈದಾನದಲ್ಲಿ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಆಟಗಾರನಾಗಿದ್ದರು. 1,366 ಪಂದ್ಯಗಳಲ್ಲಿ 1,281 ಗೋಲುಗಳ ದಾಖಲೆಯ ಜೊತೆ, ಮೂರು ಬಾರಿ ವಿಶ್ವಕಪ್‌ ಗೆದ್ದ ಏಕೈಕ ಆಟಗಾರ ಎಂಬ ದಾಖಲೆಯೂ ಪೆಲೆ ಅವರದ್ದಾಗಿದೆ. ಫುಟ್‌ಬಾಲ್‌ ಕ್ರೀಡೆಯ ಜಾಗತಿಕ ರಾಯಭಾರಿಯಾಗಿ ಗುರುತಿಸಲ್ಪಟ್ಟಿದ್ದ ಪೆಲೆ, ಆಸ್ಪತ್ರೆಯ ಬೆಡ್‌ನಿಂದಲೇ ಈ ಬಾರಿ ಕತಾರ್‌ ಫಿಫಾ ವಿಶ್ವಕಪ್‌ನಲ್ಲಿ ಬ್ರೆಜಿಲ್‌ ತಂಡಕ್ಕೆ ಶುಭ ಹಾರೈಸಿದ್ದರು.

- Advertisement -

ಫಿಫಾ ಶತಮಾನದ ಆಟಗಾರ ಪ್ರಶಸ್ತಿ ಪುರಸ್ಕೃತರಾಗಿದ್ದ ಪೆಲೆ, ಟೈಮ್ಸ್‌ನ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು. ರಾಷ್ಟ್ರೀಯ ತಂಡದ ಪರ 114 ಪಂದ್ಯಗಳನ್ನಾಡಿದ್ದ ಎಡ್ಸನ್‌ ಅರಾಂಟೆಸ್‌ ಡು ನಸಿಮೆಂಟೊ, 95 ಗೋಲುಗಳಿಸಿದ್ದರು.



Join Whatsapp