ಕೊಚ್ಚಿ: ಇಂಡಿಯನ್ ಸೂಪರ್ ಲೀಗ್, ಐಎಸ್ಎಲ್ ಟೂರ್ನಿಯ 9ನೇ ಆವೃತ್ತಿಯಲ್ಲಿ ಕೇರಳ ಬ್ಲಾಸ್ಟರ್ಸ್, ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಶುಕ್ರವಾರ ರಾತ್ರಿ ಕೇರಳದ ಕೊಚ್ಚಿಯಲ್ಲಿ ನಡೆದ ತನ್ನ ನಾಲ್ಕನೇ ಪಂದ್ಯದಲ್ಲಿ ಕಳೆದ ಆವೃತ್ತಿಯ ರನ್ನರ್ ಅಪ್ ಬ್ಲಾಸ್ಟರ್ಸ್, ಮುಂಬೈ ಸಿಟಿ ಎಫ್‌ಸಿ ವಿರುದ್ಧ 2-0 ಅಂತರದಲ್ಲಿ ಶರಣಾಯಿತು.
ಜವಾಹರ ಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 10 ನಿಮಿಷಗಳ ಅಂತರದಲ್ಲಿ ಮುಂಬೈ 2 ಗೋಲು ದಾಖಲಿಸಿ ಮಿಂಚಿನ ಆಟವಾಡಿತು. 21 ನೇ ನಿಮಿಷದಲ್ಲಿ ಮೆಹ್ತಾಬ್ ಸಿಂಗ್ ಮುಂಬೈ ತಂಡಕ್ಕೆ ಆರಂಭಿಕ ಮುನ್ನಡೆ ಗಳಿಸಿಕೊಟ್ಟರು. ಆ ನಂತರದಲ್ಲಿ ಅರ್ಜೆಂಟೀನಾದ ಆಟಗಾರ ಪೆರೇರಾ ಡಯಾಸ್, 31 ನೇ ನಿಮಿಷದಲ್ಲಿ ಗೋಲು ದಾಖಲಿಸಿ ಆತಿಥೇಯ ತಂಡಕ್ಕೆ ಆಘಾತ ನೀಡಿದರು.
ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮುಂಬೈ, 4ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಮತ್ತೊಂದೆಡೆ ಕೇರಳ ಬ್ಲಾಸ್ಟರ್ಸ್ 9ನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಹಳದಿ ಮಯವಾಗಿದ್ದ ತವರು ಮೈದಾನದಲ್ಲಿ ಪ್ರೇಕ್ಷಕರ ಭಾರಿ ಬೆಂಬಲ ದೊರೆತರೂ ಬ್ಲಾಸ್ಟರ್ಸ್ ಗೋಲಿನ ಖಾತೆ ತರೆಯಲು ವಿಫಲವಾಯಿತು. ಮತ್ತೊಂದೆಡೆ ಕಳೆದ ಆವೃತ್ತಿಯಲ್ಲಿ ಬ್ಲಾಸ್ಟರ್ಸ್ ವಿರುದ್ಧ ಎರಡು ಪಂದ್ಯಗಳಲ್ಲಿ ಅನುಭವಿಸಿದ್ದ ಸೋಲಿಗೆ ಮುಂಬೈ ಸೇಡು ತೀರಿಸಿಕೊಂಡಿತು.
ಅಕ್ಟೋಬರ್ 7ರಂದು ಜವಾಹರ ಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆದಿದ್ದ ಉದ್ಘಾಟನಾ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ಎಫ್‌ಸಿ ಯನ್ನು 3-1 ಅಂತರದಲ್ಲಿ ಕೇರಳ ಬ್ಲಾಸ್ಟರ್ಸ್ ಮಣಿಸಿತ್ತು. ಆದರೆ ಆ ಬಳಿಕ ಆಡಿದ ಮೂರೂ ಪಂದ್ಯಗಳಲ್ಲಿ ಮುಗ್ಗರಿಸಿದೆ. ಅಕ್ಟೋಬರ್ 16ರಂದು ನಡೆದ ಎಟಿಕೆ ಮೋಹನ್ ಬಗಾನ್ ವಿರುದ್ಧದ ಪಂದ್ಯದಲ್ಲಿ 5-2 ಅಂತರದಲ್ಲಿ ಮತ್ತು ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಒಡಿಶಾ ಎಫ್‌ಸಿ ವಿರುದ್ಧ 2-1 ಅಂತರದಲ್ಲಿ ಬ್ಲಾಸ್ಟರ್ಸ್ ಶರಣಾಗಿತ್ತು.