ಸರಕಾರಿ ಮನೆ ಪಡೆದು ಆನಂದಭಾಷ್ಪ ಸುರಿಸಿದ ದೇಶದ ಅತಿ ಬಡವ ಶಾಸಕ; ವೀಡಿಯೋ ವೈರಲ್

Prasthutha|

ಪಾಟ್ನಾ: ಬಿಹಾರದ ರಾಷ್ಟ್ರೀಯ ಜನತಾ ದಳದ ಶಾಸಕ ರಾಮ್ ವೃಕ್ಷ್ ಸದಾ ಅವರು ದೇಶದಲ್ಲೇ ಅತಿ ಬಡವ ಶಾಸಕರೆನಿಸಿಕೊಂಡಿದ್ದಾರೆ.

- Advertisement -

ಶಾಸಕರಿಗೆ ಮನೆಗಳು ಎಂಬ ಸರಕಾರದ ಯೋಜನೆಯಡಿ ಮನೆ ಪಡೆದ ಶಾಸಕರಲ್ಲಿ ವೃಕ್ಷ್ ಸದಾ ಒಬ್ಬರು. ಪರಿಶಿಷ್ಟ ಜಾತಿಗೆ ಸೇರಿದ ಶಾಸಕ ಸದಾ ಅವರಿಗೆ ಇತ್ತೀಚೆಗೆ ಬಿಹಾರದ ರಾಜಧಾನಿ ಪಾಟ್ನಾದ ಬೀರ್ ಚಂದ್ ಪಟೇಲ್ ಪಥದಲ್ಲಿ ಮೂರು ಮಹಡಿಯ ಮನೆಯನ್ನು ಕಟ್ಟಿ ಕೊಡಲಾಗಿದೆ.

47ರ ಪ್ರಾಯದ ಸದಾ 5 ಮಂದಿ ಗಂಡು ಮಕ್ಕಳು ಒಬ್ಬ ಮಗಳು ಸೇರಿ 12 ಜನರ ಕುಟುಂಬ ಹೊಂದಿದ್ದು ಹಳ್ಳಿಯ ಮುರುಕಲು ಮನೆಯಲ್ಲಿ ವಾಸಿಸುತ್ತಿದ್ದರು.

- Advertisement -

ಮುಖ್ಯಮಂತ್ರಿಯಿಂದ ತನಗೆ ಮನೆಯ ಬೀಗದ ಕೈ ದೊರೆತಾಗ ಮಾತನಾಡಿದ ಶಾಸಕ ಸದಾ“ನಾನು ಬಿಹಾರದಲ್ಲೇ ಅತಿ ಬಡವ ಶಾಸಕ. ಬಡವನಿಗೆ ಏನಾದರೂ ದೊರೆತರೆ ಅದು ಆತನಿಗೆ ದೀಪಾವಳಿಯೇ ಆಗಿರುತ್ತದೆ. ಈಗ ನನಗೆ ಮನೆ ಒದಗಿಸಿದ್ದಾರೆ. ಆ ಮನೆ ನೋಡಿದೆ, ಅದನ್ನು ಕನಸಿನಲ್ಲಿಯೂ ನೋಡಿರಲಿಲ್ಲ” ಎಂದು ಕಣ್ಣೀರಾದ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

“ತಾನು ಮುಸಹರ್ ಸಮುದಾಯದಿಂದ ಬಂದಿದ್ದೇನೆ. ಲಾಲು ಪ್ರಸಾದ್ ಯಾದವರು ನನ್ನನ್ನು ನಾಯಕನಾಗಿಸಿ, ಶಾಸಕರಾಗಿ ಮಾಡಿದ್ದಾರೆ. ನಾನು 1995ರಲ್ಲಿ ರಾಜಕೀಯ ಸೇರಲು ತೀರ್ಮಾನಿಸಿದೆ. ಚುನಾವಣಾ ಪ್ರಚಾರದ ವೇಳೆ ಆರ್ ಜೆಡಿ ಅಧ್ಯಕ್ಷರಾದ ಲಾಲೂ ಪ್ರಸಾದ್ ರನ್ನು ಭೇಟಿಯಾದೆ. ಆಗ ನಾನು ಇಟ್ಟಿಗೆ ಭಟ್ಟಿ ಒಂದರಲ್ಲಿ ಕೆಲಸ ಮಾಡುತ್ತಿದ್ದೆ. ಅನಂತರ ಚುನಾವಣೆಗೆ ಸ್ಪರ್ಧಿಸಿದೆನಾದರೂ ಗೆಲ್ಲಲಾಗಲಿಲ್ಲ.  2000 ಹಾಗೂ 2005ರಲ್ಲಿ ಪಶುಪತಿ ಕುಮಾರ್ ಪಾರಸ್ ಎದುರು ಸೋತೆ. ಕೊನೆಗೂ 2020ರಲ್ಲಿ ಗೆದ್ದೆ.” ಎಂದೂ ಸದಾ ನೆನಪಿಸಿದರು.

Join Whatsapp