ರಾಜ್ಯದಲ್ಲಿ 13 ಜಿಲ್ಲೆಗಳಲ್ಲಿ ಪ್ರವಾಹ ಹಿನ್ನಲೆ: ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊಕಾನ್ಫರೆನ್ಸ್ ನಡೆಸಿದ ಮುಖ್ಯಮಂತ್ರಿ ಬೊಮ್ಮಾಯಿ

Prasthutha|

ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ಆದ್ಯತೆ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸೂಚನೆ

- Advertisement -

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು 13 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಕಳೆದ ಮೂರು ನಾಲ್ಕು ದಿನಗಳಿಂದ ಕರಾವಳಿ, ಮಲೆನಾಡು, ಹಾಗೂ ಬಯಲು ಸೀಮೆಯಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದ್ದು, ಜನ, ಜಾನುವಾರುಗಳಿಗೆ ತೊಂದರೆಯಾಗಿದೆ. 13 ಜಿಲ್ಲೆಗಳಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಇದ್ದು, 17 ತಾಲ್ಲೂಕುಗಳಲ್ಲಿ ಮಳೆ ಹಾವಳಿ ಹೆಚ್ಚಾಗಿದೆ. ಇದುವರೆಗೂ ಜೂನ್ 1 ರಿಂದ ಈವರೆಗೆ 12 ಜನ ಮೃತಪಟ್ಟಿದ್ದು, 65 ಜಾನುವಾರುಗಳಿಗೆ ಜೀವಹಾನಿಯಾಗಿದೆ ಎಂದು ತಿಳಿಸಿದರು.

- Advertisement -

ಉಸ್ತುವಾರಿ ಸಚಿವರೊಂದಿಗೆ ವೀಡಿಯೋ ಸಂವಾದದಲ್ಲಿ ಭೂ-ಕುಸಿತ ಉಂಟಾಗಿರುವ ಸ್ಥಳಗಳಲ್ಲಿ ಕೆಳಭಾಗದಲ್ಲಿರುವ ಜನರ ಸ್ಥಳಾಂತರಕ್ಕೆ ಆದೇಶಿಸಲಾಗಿದೆ. ಕೆಲವೆಡೆಗಳಲ್ಲಿ ಸಂಪೂರ್ಣ ಭೂಕುಸಿತವಾಗಿಲ್ಲ, ಭೂಮಿ ಸ್ವಲ್ಪ ಕುಸಿದಿದ್ದು ರಸ್ತೆ ಸಂಚಾರ ಸ್ಥಗಿತವಾಗಿದೆ. ಅದನ್ನು ಟಾಸ್ಕ್ ಪೋರ್ಸ್ ಗಳನ್ನು ರಚಿಸಿ ಕೂಡಲೇ ತೆರವುಗೊಳಿಸಲು ಸೂಚನೆ ನೀಡಲಾಯಿತು ಎಂದರು.
ಮನೆ ಹಾನಿಯಾದಲ್ಲಿ ಭಾಗಶಃ ಅಥವಾ ನೀರು ನುಗ್ಗಿರುವ ಮನೆಗಳಿಗೆ ಮೊದಲು 10 ಸಾವಿರ ತುರ್ತು ಪರಿಹಾರ ಕೂಡಲೇ ನೀಡುವಂತೆ ಆದೇಶ ಮಾಡಿದ್ದು, ನಂತರ ಹಾನಿ ಪ್ರಮಾಣವನ್ನು ವರದಿಯನ್ನು 2-3 ದಿನಗಳಲ್ಲಿ ಜಿಲ್ಲಾ ಪಂಚಾಯತ್ ನ ಇಂಜಿನಿಯರ್ ಗಳಿಂದ ಪಡೆದು ನಿಯಮಾನುಸಾರ ಅಂದಾಜು ಮಾಡಿ, ವರ್ಗೀಕರಿಸಿ, ರಾಜೀವ್ ಗಾಂಧಿ ವಸತಿ ನಿಗಮದ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.

ಮಳೆ ಪ್ರಮಾಣ ಕಡಿಮೆಯಾದ ನಂತರ ಬೆಳೆ ಹಾನಿ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಲು ಪಡೆದು ಪರಿಹಾರ ನೀಡುವಂತೆ ಸೂಚಿಸಲಾಯಿತು.

ಎಸ್.ಡಿ.ಆರ್.ಎಫ್/ಎನ್.ಡಿ.ಆರ್.ಎಫ್ ತಂಡಗಳನ್ನು ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳವಂತೆ, ಸೂಚಿಸಲಾಯಿತು.
ಮಳೆಯಿಂದ ಹಾನಿಗೊಳಗಾದ ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ರಸ್ತೆ ದುರಸ್ತಿಯನ್ನು ಆದ್ಯತೆ ಮೇರೆಗೆ ಕೈಗೊಂಡು ಸಂಚಾರ ಸಂಪರ್ಕ ಸಮರ್ಪಕವಾಗಿರುವಂತೆ ಎಚ್ಚರ ವಹಿಸಲು ಸೂಚನೆ ನೀಡಿದ್ದು, ಹಾನಿಯಾದ ಪ್ರಮಾಣದ ವರದಿಯನ್ನು ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ವಿದ್ಯುತ್ ಕಂಬಗಳು ಬಿದ್ದು ಹೋದಲ್ಲಿ ಕೂಡಲೇ ಸರಿಪಡಿಸಿ, ವಿದ್ಯುತ್ ಸರಬರಾಜು ಅಡಚಣೆಯಾಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ.

ಕಡಲ ಕೊರೆತ ಆದಲ್ಲಿ ತುರ್ತು ಕಾಮಗಾರಿ ಕೂಡಲೇ ಕೈಗೊಂಡು ಹೆಚ್ಚಿನ ಹಾನಿಯಾಗದಂತೆ ತಾತ್ಕಾಲಿಕವಾಗಿ ಕಡಲ ಕೊರೆತ ಆಗದಂತೆ ಕ್ರಮವಹಿಸಬೇಕು. ರಸ್ತೆಗಳು ಕೊರೆತ ಆಗಿದ್ದು, ಅವುಗಳನ್ನು ಪುನಃಸ್ಥಾಪಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ತಿಳಿಸಲಾಗಿದೆ. ಈ ಬಾರಿ ಸರ್ಕಾರವು ಶಾಶ್ವತವಾಗಿ ಕಡಲ ಕೊರೆತ ಆಗದಂತೆ ಒಂದು ವಿಶೇಷ ತಂತ್ರಜ್ಞಾನದ ಮೂಲಕ ತೆಡೆದು ಇನ್ನು ಮುಂದೆ ಶಾಶ್ವತ ಕಡಲ ಕೊರೆತ ಆಗದ ರೀತಿಯಲ್ಲಿ ಕ್ರಮವಹಿಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಮನ್ವಯದೊಂದಿಗೆ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ರಚಿಸಿ, ನೇರ ಸಂಪರ್ಕ ಹೊಂದಲು ತಿಳಿಸಲಾಗಿದೆ. ನಿಯಂತ್ರಣ ಕೊಠಡಿ ಸ್ಥಾಪಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸೂಚಿಸಲಾಯಿತು. ಪೊಲೀಸರು ಸೇವೆಗೆ ದಿನದ 24 ಗಂಟೆಯೂ ಲಭ್ಯರಿರಬೇಕು.
ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಬಳಿ ಒಟ್ಟು 735.59 ಕೋಟಿ ರೂ. ಲಭ್ಯವಿದೆ.
ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದ್ದು ಬೀದರ್ ಜಿಲ್ಲೆಯಲ್ಲಿ ರೇಡ್ ಅಲರ್ಟ್, ಕರಾವಳಿ ಪ್ರದೇಶ ಹಾಗೂ ಹಾವೇರಿ ಜಿಲ್ಲೆಯಲ್ಲಿ ಆರೋಜ್ ಅಲರ್ಟ್ ಇದ್ದು, ಒಟ್ಟಾರೆ ವ್ಯಾಪಕವಾಗಿ ಮುಂದಿನ 3-4 ದಿನಗಳಲ್ಲಿ ಮಳೆಯಾಗುವಂತ ಸೂಚನೆಯನ್ನು ಹವಾಮಾನ ಇಲಾಖೆಯವರು ತಿಳಿಸಿರುತ್ತಾರೆಂದು ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ಕೊಯ್ನಾ ಡ್ಯಾಂ ಹಾಗೂ ಹೊರ ರಾಜ್ಯದ ಇತರೆ ಡ್ಯಾಂ ಗಳಲ್ಲಿ ಪೂರ್ಣ ಪ್ರಮಾಣದ ನೀರು ತುಂಬಿರುವುದಿಲ್ಲ. ರಾಜ್ಯದ ಘಟಪ್ರಭ, ಮಲಪ್ರಭ, ಹಿಡ್ಕಲ್ ಡ್ಯಾಂ ಹಾಗೂ ನವಿಲತೀರ್ಥದಲ್ಲಿ ಶೇಕಡಾ 50ರಷ್ಟು ಪ್ರಮಾಣ ನೀರು ತುಂಬಿದ್ದು, ಇನ್ನೂ ಶೇಕಡಾ 50ರಷ್ಟು ನೀರು ತುಂಬಲು ಬಾಕಿ ಇದೆ. ಹೀಗಾಗಿ ಹೊರ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಎಚ್ಚರವಹಿಸುವಂತೆ ಸೂಚನೆ ನೀಡಿದ್ದು, ಅಂತರರಾಜ್ಯದ ಸಮಿತಿ ಇದ್ದು, ಹೊರ ರಾಜ್ಯ ಮತ್ತು ರಾಜ್ಯ ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.

ಜೂನ್ 1 ರಿಂದ ಈವರೆಗೆ ಹಾನಿ ವಿವರ
ಕ್ರ.ಸಂ. ವಿವರ ಹಾನಿಯ ಪ್ರಮಾಣ (ಜೂನ್ 1ರಿಂದ ಈವರೆಗೆ)

  1. ಪ್ರವಾಹಪೀಡಿತ ಜಿಲ್ಲೆಗಳ ಸಂಖ್ಯೆ 13
  2. ತಾಲ್ಲೂಕುಗಳು 17
  3. ಗ್ರಾಮಗಳು 37
  4. ಬಾಧಿತ ಜನಸಂಖ್ಯೆ 495
  5. ರಕ್ಷಿಸಲಾದ ಜನರ ಸಂಖ್ಯೆ 90
  6. ತೆರೆಯಲಾಗಿರುವ ಕಾಳಜಿ ಕೇಂದ್ರಗಳು 4
  7. ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದವರ ಸಂಖ್ಯೆ 90
  8. ಮಾನವ ಜೀವ ಹಾನಿ 12
  9. ಜಾನುವಾರು ಜೀವಹಾನಿ 65


Join Whatsapp