ಪವಿತ್ರ ಹಜ್ 2022: ಅರಫಾ ಧಾರ್ಮಿಕ ವಿಧಿ ವಿಧಾನವನ್ನು ಪೂರ್ತಿಗೊಳಿಸಿದ ಯಾತ್ರಾರ್ಥಿಗಳು

Prasthutha|

ಮಕ್ಕಾ: ಮುಸ್ಲಿಮ ರ ಪವಿತ್ರ ಹಜ್ ಧಾರ್ಮಿಕ ವಿಧಿ ವಿಧಾನಗಳಲ್ಲಿ ಒಂದಾದ ಅರಫಾ ಮೈದಾನ ವಾಸ್ತವ್ಯವನ್ನು ಪೂರ್ತಿಗೊಳಿಸಿದ ಯಾತ್ರಾರ್ಥಿಗಳು ಸಂಜೆಯ ನಮಾಝ್’ನ ಬಳಿಕ ಮಕ್ಕಾದಲ್ಲಿರುವ ಮುಝ್ದಲಿಫಾ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ.

- Advertisement -

ಪವಿತ್ರ ಹಜ್ ಕರ್ಮದ ಭಾಗವಾಗಿ ಯಾತ್ರಾರ್ಥಿಗಳು ದುಲ್ ಹಜ್ 7ರ ಮುಸ್ಸಂಜೆಯ (ಮಗ್ರಿಬ್) ನಮಾಝ್ ‘ನಿಂದ ಹಿಡಿದು ದುಲ್ ಹಜ್ 8 ರಂದು ನಡೆಯುವ ಧಾರ್ಮಿಕ ಪ್ರವಚನದ ವರೆಗೂ ಮಕ್ಕಾದಲ್ಲಿರುವ ಅರಫಾ ಮೈದಾನದಲ್ಲಿ ವಾಸ್ತವ್ಯ ಹೂಡುವುದು. ಆ ಬಳಿಕ ಮಧ್ಯಾಹ್ನದ (ಝುಹುರ್) ಮತ್ತು ಸಂಜೆಯ (ಅಸರ್) ನಮಾಝ್ ಅನ್ನು ಅಲ್ಲೇ ಒಟ್ಟಿಗೆ ನಿರ್ವಹಿಸುವುದು ಸಂಪ್ರದಾಯ. ಸದ್ಯ ಜಗತ್ತಿನ ಎಲ್ಲಾ ಯಾತ್ರಾರ್ಥಿಗಳು ಈ ಕರ್ಮವನ್ನು ಪೂರ್ತಿಗೊಳಿಸಿದ್ದು, ಮತ್ತೊಂದು ವಿಧಿ ವಿಧಾನವನ್ನು ಅನುಷ್ಠಾನಗೊಳಿಸಲು ಮುಝ್ದಲಿಫಾ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

ಮುಝ್ದಲಿಫಾ ತಲುಪಿದ ಪ್ರತಿ ಯಾತ್ರಾರ್ಥಿಗಳು ಮುಸ್ಸಂಜೆಯ (ಮಗ್ರಿಬ್) ಮತ್ತು ರಾತ್ರಿ (ಇಶಾ) ನಮಾಝ್ ವರೆಗೂ ಅಲ್ಲೇ ಉಳಿಯಬೇಕಾಗಿದ್ದು, ಇದಾದ ಬಳಿಕ ಅಲ್ಲಿಂದ ಹೊರಡಬೇಕಾದ ಹಜ್ ಯಾತ್ರಿಕರು, ದುಲ್ ಹಜ್ 9 ರಂದು ಮೀನಾ ತಲುಪಲಿದ್ದಾರೆ. ಅಲ್ಲಿ ತಮಗಾಗಿ ವ್ಯವಸ್ಥೆಗೊಳಿಸಿದ ಟೆಂಟ್’ನಲ್ಲಿ ವಿಶ್ರಾಂತಿ ಪಡೆದು ಪವಿತ್ರ ಹಜ್’ನ ಇನ್ನೊಂದು ವಿಧಾನವಾದ ಸೈತಾನನಿಗೆ ಕಲ್ಲೆಸೆಯಲು ಜಮ್ರಾತ್’ಗೆ ತೆರಳಬೇಕಾಗಿದೆ. ಇದು ಸತತ ಮೂರು ದಿನಗಳ ವರೆಗೂ ನಡೆಯುತ್ತದೆ. ದುಲ್ ಹಜ್ 11 ರ ಮುಸ್ಸಂಜೆಯ (ಮಗ್ರಿಬ್) ನಮಾಝ್’ಗೂ ಮೊದಲು ಮೀನಾ ಗಡಿಯನ್ನು ತೊರೆಯಬೇಕಾಗಿದೆ. ಅಲ್ಲದೆ ಪ್ರಾಣಿಯೊಂದನ್ನು ಕಡ್ಡಾಯವಾಗಿ ಬಲಿಯರ್ಪಿಸಬೇಕು. ಒಂದುವೇಳೆ ಮುಸ್ಸಂಜೆಯ (ಮಗ್ರಿಬ್) ನಮಾಝ್ ಗೆ ಮೊದಲು ಮೀನಾ ಗಡಿ ತೊರೆಯದ ಹಜ್ ಯಾತ್ರಾರ್ಥಿಗಳು ದುಲ್ ಹಜ್ 12 ರಂದು ಮೀನಾದಲ್ಲೇ ಉಳಿಯಬೇಕಾಗಿದೆ ಎಂಬುದು ಇಸ್ಲಾಮಿನ ಸಂಪ್ರದಾಯ. ಇದರೊಂದಿಗೆ ಹಜ್ ಯಾತ್ರಿಕರ ಪ್ರತಿ ವಿಧಾನಗಳು ಪೂರ್ತಿಯಾದಂತಾಗುತ್ತದೆ.

Join Whatsapp