ಮಂಗಳೂರು-ಗಲ್ಫ್ ರಾಷ್ಟ್ರಗಳ ನಡುವೆ ವಿಮಾನಯಾನ ದುಬಾರಿ: ಕರಾವಳಿಗರು ಕಂಗಾಲು

Prasthutha|

ಮಂಗಳೂರು: ಮಂಗಳೂರು-ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನ ಯಾನ ಭಾರೀ ದುಬಾರಿಯಾಗಿದ್ದು ಕರಾವಳಿಗರು ಕಂಗಾಲಾಗಿದ್ದಾರೆ ಮತ್ತು ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಮಂಗಳೂರು ,ಕಾಸರಗೋಡು ಮೂಲದ ಎನ್ ಆರ್ ಐ ಗಳು ನೇರವಾಗಿ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಟ್ಯಾಕ್ಸಿ ಮೂಲಕ ಊರಿಗೆ ಆಗಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ನೆರೆ ರಾಜ್ಯದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಲಿಸಿದರೆ ಮಂಗಳೂರಿನ ವಿಮಾನ ದರ ದುಪ್ಪಟ್ಟಾಗಿದೆ. ಮಂಗಳೂರಿನಿಂದ ವಿಮಾನ ಯಾನ ದಿನೇದಿನೇ ದುಬಾರಿಯಾಗುತ್ತಿದ್ದು ಕರ್ನಾಟಕ ಕರಾವಳಿಯ ಅನಿವಾಸಿಗರು ಪಕ್ಕದ ಕಣ್ಣೂರಿನ ಮೊರೆ ಹೋಗುತ್ತಿದ್ದಾರೆ.

ಏರ್ ಇಂಡಿಯಾ ಎಕ್ಸ್ ಪ್ರೆಸ್ ಮೂಲಕ ಅಬುಧಾಬಿಯಿ- ಕಣ್ಣೂರು ವಿಮಾನ ದರ 9,700 ರೂ, ಅದುವೇ ಮಂಗಳೂರಿಗೆ ಬರೋದಾದರೆ 18,350ರೂ. ಹೀಗೆ ದುಪ್ಪಟ್ಟು ಪ್ರಮಾಣದಲ್ಲಿ ಟಿಕೇಟು ದರ ವಿಧಿಸಲಾಗುತ್ತಿದೆ. ದಮ್ಮಾಮಿನಿಂದ ಮಂಗಳೂರಿಗೆ ತಡೆರಹಿತ ಪ್ರಯಾಣ ಮಾಡಬೇಕಾದರೆ 50 ಸಾವಿರ ಭರಿಸಬೇಕಾಗುತ್ತದೆ. ಇದು ಇತರೆಲ್ಲ ರಾಷ್ಟ್ರಗಳ ಪ್ರಯಾಣಕ್ಕಿಂತಲೂ ದುಬಾರಿ ಎಂದು ಅನಿವಾಸಿಗರು ಆತಂಕ ವ್ಯಕ್ತಪಡಿಸಿದ್ದಾರೆ.

- Advertisement -

ಕರಾವಳಿಯ ಅನಿವಾಸಿ ಭಾರತೀಯರ ಸತತ ಹೋರಾಟದ ಫಲವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲೆಯೆತ್ತಿದೆ. ಆದರೆ ಇದೀಗ ಅವರಿಗೇ ಅದು ಕೈಗೆಟುಕದ ತುತ್ತಾಗಿಬಿಟ್ಟಿದೆ. ಕೋವಿಡ್ ಬಳಿಕ ಅನಿವಾಸಿ ಕನ್ನಡಿಗರು  ಬಹಳ ಸಂಕಷ್ಟ ಎದುರಿಸುತ್ತಿದ್ದು ಇಂತಹ ಬೆಲೆ ಏರಿಕೆಯಿಂದಾಗಿ ಆರ್ಥಿಕವಾಗಿ ತುಂಬಾ ತೊಂದರೆಗೆ ಒಳಗಾಗಬೇಕಾಗಿ ಬಂದಿದೆ. ಆದರೂ  ಈ ಬಗ್ಗೆ ಸಚಿವರು , ಸಂಸದರು ಗಮನ ಹರಿಸುತ್ತಿಲ್ಲ ಎಂದು ಕರಾವಳಿಯ ಅನಿವಾಸಿಗರು ಅಳಲು ತೋಡಿಕೊಂಡಿದ್ದಾರೆ.



Join Whatsapp