ಉತ್ತರಪ್ರದೇಶ | ಪೆಟ್ರೋಲ್‌, ಟೈರ್‌ ಬಳಸಿ ಶವದ ಅಂತ್ಯಸಂಸ್ಕಾರ : ಐದು ಮಂದಿ ಪೊಲೀಸರ ಅಮಾನತು

Prasthutha|

ಉತ್ತರಪ್ರದೇಶದ ಮಾಲ್ದೆಪುರ ಗ್ರಾಮದ ಗಂಗಾ ನದಿಯಲ್ಲಿ ತೇಲಿಬಂದ ಶವವನ್ನು ಪೆಟ್ರೋಲ್‌‌ ಹಾಗೂ ಟೈರ್‌‌ ಬಳಸಿ ಅಂತ್ಯಸಂಸ್ಕಾರ ನೆರವೇರಿಸಿದ ಐವರು ಪೊಲೀಸ್‌ ಕಾನ್‌ಸ್ಟೇಬಲ್‌ಗಳನ್ನು ಅಮಾನತು ಮಾಡಲಾಗಿದೆ” ಎಂದು ಮಂಗಳವಾರ ಅಧಿಕಾರಿಗಳು ಹೇಳಿದ್ದಾರೆ. ಅಮಾನತುಗೊಂಡ ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ವೀರೇಂದ್ರ ಯಾದವ್, ಜೈಸಿಂಗ್,ಪುನೀತ್ ಪಾಲ್, ಜೈ ಹಾಗೂ ಉಮೇಶ್ ಪ್ರಜಾಪತಿ ಎಂದು ಗುರುತಿಸಲಾಗಿದೆ.


“ಪೊಲೀಸರು ಶವಕ್ಕೆ ಅಂತ್ಯಸಂಸ್ಕಾರ ಮಾಡುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸೋಮವಾರ ವೈರಲ್‌ ಆಗಿತ್ತು. ಈ ವೇಳೆ ಪೊಲೀಸರು ಅಸೂಕ್ಷ್ಮತೆಯಿಂದ ವರ್ತಿಸಿದ್ದಾರೆ. ಹಾಗಾಗಿ ಪೊಲೀಸ್‌ ಕಾನ್‌ಸ್ಟೇಬಲ್‌‌‌ಗಳನ್ನು ಅಮಾನತು ಮಾಡಲಾಗಿದ್ದು, ತನಿಖೆಗೆ ಆದೇಶಲಾಗಿದೆ. ಈ ಬಗ್ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಯಾದವ್ ಅವರು ತನಿಖೆ ನಡೆಸಲಿದ್ದಾರೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಟಾಡ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಫೆಫಾನಾ ಪೊಲೀಸ್ ಠಾಣಾಧಿಕಾರಿ ಸಂಜಯ್ ತ್ರಿಪಾಠಿ ಅವರು, “ಗಂಗಾ ನದಿಯಲ್ಲಿ ತೇಲಿಕೊಂಡು ಬಂದಿದ್ದ ಶವಗಳ ಅಂತ್ಯಸಂಸ್ಕಾರವನ್ನು ಮೇ 15ರಂದು ನಡೆಸಲಾಗಿತ್ತು. ಈ ವೇಳೇ ಶವಗಳ ಮೇಲೆ ಟೈರ್‌ ಹಾಗೂ ಪೆಟ್ರೋಲ್‌ ಸುರಿದು ಅಂತ್ಯಸಂಸ್ಕಾರ ಮಾಡಲಾಗಿತ್ತು” ಎಂದು ತಿಳಿಸಿದ್ದಾರೆ.

- Advertisement -