ನವಜೋಡಿ ಸೇರಿ ಐವರು ಸಂಬಂಧಿಗಳನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

Prasthutha|

ಲಕ್ನೋ: ಕೊಡಲಿ ಬಳಸಿ ವ್ಯಕ್ತಿಯೋರ್ವ ತನ್ನ ಐವರು ಸಂಬಂಧಿಗಳನ್ನು ಕೊಂದು ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಗೋಕುಲಪುರ ಅರ್ಸರಾ ಹಳ್ಳಿಯಲ್ಲಿ ಮುಂಜಾನೆ ಸುಮಾರು 4:30ಯಿಂದ 5 ಗಂಟೆಯ ಒಳಗಾಗಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಶಿವವೀರ್ ಯಾದವ್ (30) ಎಂಬಾತ ತನ್ನ ಇಬ್ಬರು ತಮ್ಮಂದಿರಾದ ಬುಲ್ಲನ್ ಯಾದವ್ (25) ಮತ್ತು ಸೋನು ಯಾದವ್ (21) ಎಂಬವರನ್ನು ಕೊಡಲಿಯಿಂದ ಹತ್ಯೆ ಮಾಡಿದ್ದಾನೆ. ಅಲ್ಲದೇ ಸೋನು ಯಾದವ್‌ನ ಹೆಂಡತಿ ಸೋನಿಯನ್ನೂ (20) ಕೊಲೆ ಮಾಡಿದ್ದು, ಬಳಿಕ ಬಾಮೈದುನ ಸೌರಭ್ (23) ಮತ್ತು ಆತನ ಸ್ನೇಹಿತ ದೀಪಕ್ (20) ಎಂಬವರನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಗಳು ತಿಳಿಸಿವೆ.

ಇಷ್ಟು ಮಾತ್ರವಲ್ಲದೇ ಆರೋಪಿ ತನ್ನ ಹೆಂಡತಿ ಡಾಲಿ (24) ಮತ್ತು ಭರ್ತನ ಜಿಲ್ಲೆಯ ನಾಗ್ಲ ರಾಮ್‌ಲಾಲ್ ಪೊಲೀಸ್ ಠಾಣೆಯ ಇಟವಾದಲ್ಲಿ ವಾಸಿಸುತ್ತಿದ್ದ ತಾಯಿಯ ಸಂಬಂಧಿಯಾದ ಸುಷ್ಮಾ (35) ಎಂಬವರನ್ನು ಗಾಯಗೊಳಿಸಿದ್ದಾನೆ. ಬಳಿಕ ದೇಶೀಯವಾಗಿ ತಯಾರಿಸಿದ ಪಿಸ್ತೂಲ್ ಒಂದರ ಸಹಾಯದಿಂದ ತನ್ನನ್ನು ತಾನು ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

- Advertisement -

ಗೋಕುಲಪುರ ಹಳ್ಳಿಯಲ್ಲಿ ಘಟನೆ ನಡೆದಿದ್ದು, ಆರೋಪಿಯ ಸಹೋದರ ಸೋನು ಯಾದವ್ ಮತ್ತು ಆತನ ಹೆಂಡತಿ ಸೋನಿ ಘಟನೆಯ ಹಿಂದಿನ ದಿನವಷ್ಟೇ ಮದುವೆಯಾಗಿದ್ದರು. ವಿವಾಹದ ನಂತರ ನವಜೋಡಿ ತಮ್ಮ ಮನೆಗೆ ಬಂದ ಬಳಿಕ ಹತ್ಯೆ ಮಾಡಲಾಗಿದೆ. ನವಜೋಡಿಗಳ ಕೊಲೆಯ ಬಳಿಕ ಬಾಮೈದುನ ಮತ್ತು ಆತನ ಸ್ನೇಹಿತನನ್ನು ಹತ್ಯೆ ಮಾಡಲಾಗಿದೆ ಎಂದು ಮೈನ್‌ಪುರಿ ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ತಿಳಿಸಿದ್ದಾರೆ.

ಆರೋಪಿಯ ಈ ಕೃತ್ಯಕ್ಕೆ ಯಾವುದೇ ನಿಖರ ಕಾರಣಗಳು ತಿಳಿದುಬಂದಿಲ್ಲ. ಘಟನೆಯಲ್ಲಿ ಹತ್ಯೆಯಾದ ಸಂಬಂಧಿಗಳ ಮೃತದೇಹವನ್ನು ಮೈನ್‌ಪುರಿ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ಕಳುಹಿಸಲಾಗಿದೆ. ಅಲ್ಲದೇ ಘಟನೆಯಲ್ಲಿ ಗಾಯಗೊಂಡ ಆರೋಪಿಯ ಹೆಂಡತಿ ಡಾಲಿ ಮತ್ತು ಸಂಬಂಧಿ ಸುಷ್ಮಾ ಅವರು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ