ಅಧಿಕಾರಕ್ಕಾಗಿ ಗ್ಯಾರಂಟಿ ಘೋಷಿಸಿ ಈಗ ಪ್ರಧಾನಿ ಮೋದಿ ಕಡೆ ಬೊಟ್ಟು ತೋರಿಸುತ್ತೀರಾ?: ಸಿದ್ದರಾಮಯ್ಯಗೆ ಯಡಿಯೂರಪ್ಪ ಪ್ರಶ್ನೆ

Prasthutha|

ಬೆಂಗಳೂರು: ಅಧಿಕಾರಕ್ಕಾಗಿ ಗ್ಯಾರಂಟಿ ಘೋಷಿಸಿ ಈಗ ಪ್ರಧಾನಿ ನರೇಂದ್ರ ಮೋದಿ ಕಡೆ ಬೊಟ್ಟು ತೋರಿಸುತ್ತೀರಾ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನವರು ಘೋಷಿಸಿರುವ ಗ್ಯಾರಂಟಿ ಜಾರಿ ಮಾಡಬೇಕು. ಇಲ್ಲದಿದ್ದರೆ ಕಾಂಗ್ರೆಸ್​ನವರು ಅಧಿಕಾರ ಬಿಟ್ಟು ತೊಲಗಬೇಕು ಎಂದು ವಾಗ್ದಾಳಿ ನಡೆಸಿದರು.

- Advertisement -

ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡದ ಕಾಂಗ್ರೆಸ್ ವಿರುದ್ಧ ಅಧಿವೇಶನ ಆರಂಭದ ದಿನದಿಂದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಬೇಕು. ನಮ್ಮ ಶಾಸಕರು ಅಧಿವೇಶನ ನಡೆಸಲು ಬಿಡದೆ ಹೋರಾಡಬೇಕು. ಉಪವಾಸ ಸತ್ಯಾಗ್ರಹ ಬೇಡ, ಊಟ ಮಾಡಿ ಪ್ರತಿಭಟನೆ ಮಾಡೋಣ. ಈ ಸರ್ಕಾರದ ಮೂಗು ಹಿಂಡುವ ಕೆಲಸ ನಾವು ಮಾಡೋಣ ಎಂದು ಹೇಳಿದ ಯಡಿಯೂರಪ್ಪ, ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿ ಜೊತೆ 10 ಕೆಜಿ ಅಕ್ಕಿ ಸೇರಿಸಿ ಒಟ್ಟು 15 ಕೆಜಿ ಅಕ್ಕಿ ಕೊಡಬೇಕು ಎಂದು ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದರು.

ಕಾಂಗ್ರೆಸ್​ನವರಿಗೆ ರಾಜಕೀಯ ದೊಂಬರಾಟ ಮಾಡಲು ಬಿಡುವುದಿಲ್ಲ. ಬಿಬಿಎಂಪಿ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲಬೇಕು. ಸಾಧನೆ ಮಾತಾಡಬೇಕು, ಮಾತಾಡುವುದೇ ಸಾಧನೆ ಆಗಬಾರದು ಎಂದು ಯಡಿಯೂರಪ್ಪ ಹೇಳಿದರು.