ಬೆಂಗಳೂರು: ಕಾಂಗ್ರೆಸ್ ವಕ್ತಾರೆ ಸೋನಿಯಾ ಗಾಂಧಿಯನ್ನು ಇಡಿ ವಿಚಾರಣೆಗೆ ಒಳಪಡಿಸಿದ್ದನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆ ವೇಳೆ ಶೇಷಾದ್ರಿಪುರಂ ಮತ್ತು ಶಾಂತಿನಗರದಲ್ಲಿ ಎರಡು ಕಾರುಗಳಿಗೆ ಬೆಂಕಿ ಹಚ್ಚಲಾಗಿದ್ದು, ಈ ಸಂಬಂಧ ಐವರನ್ನು ಅರೆಸ್ಟ್ ಮಾಡಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ಧಾರೆ.
ಪ್ರೀಡಂ ಪಾರ್ಕ್ ನಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿತ್ತು. ಶಾಂತಿನಗರ ಮತ್ತು ಶೇಷಾದ್ರಿ ಪುರ ಎರಡು ಕಡೆ ಯಾವುದೇ ಅನುಮತಿ ನೀಡಲಿರಲಿಲ್ಲ. ಆದರೂ ಶಾಂತಿನಗರ ಮತ್ತು ಶೇಷಾದ್ರಿಪುರಂ ನಲ್ಲಿ ಪ್ರತಿಭಟನೆ ನಡೆಸಿ ಪ್ರತಿಭಟನಾಕಾರರು ಪೂರ್ವನಿಯೋಜಿತವಾಗಿ ಎರಡು ಕಾರುಗಳನ್ನು ತಂದು ಅಲ್ಲಿ ನಿಲ್ಲಿಸಿದ್ದು, ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ.
ಶಾಂತಿನಗರದಲ್ಲಿ ಕಾರಿಗೆ ಬೆಂಕಿ ಹಚ್ಚಿದ್ದ ಮಂಜುನಾಥ, ದಕ್ಷಿಣ ಮೂರ್ತಿ, ಅಗಸ್ತಿನ, ರಿಯಾನ್ ಸೇರಿ ಐವರನ್ನ ಬಂಧನ ಮಾಡಲಾಗಿದೆ. ಅವರನ್ನು ತನಿಖೆಗೆ ಒಳಪಡಿಸಲಾಗುತ್ತಿದೆ. ಇನ್ನು ಶೇಷಾದ್ರಿಪುರ ಪ್ರಕರಣದಲ್ಲಿ ಆರೋಪಿಗಳ ಶೋಧ ಕಾರ್ಯ ಮುಂದುವರೆದಿದೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ಶ್ರೀನಿವಾಸ್ ಗೌಡ ತಿಳಿಸಿದ್ಧಾರೆ.