ದಾಂಡೇಲಿ: ಮರದ ಪೀಠೋಪಕರಣ ತಯಾರಿಕೆ ಹಾಗೂ ಮಾರಾಟ ಮಳಿಗೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಅಪಾರ ಹಾನಿಯುಂಟಾದ ಘಟನೆ ದಾಂಡೇಲಿಯ ಅಂಬೇವಾಡಿಯಲ್ಲಿ ನಡೆದಿದೆ.
ಉದಯ ನಾಯ್ಕ ಮಾಲೀಕತ್ವದ ವುಡ್ ಲ್ಯಾಂಡ್ ಪೀಠೋಪಕರಣಗಳ ಮಳಿಗೆಯಲ್ಲಿ ಹಠಾತ್ ಕಾಣಿಸಿಕೊಂಡ ಬೆಂಕಿಗೆ ಮಳಿಗೆಯಲ್ಲಿ ಇದ್ದ ಸಾಗುವಾನಿ, ಹೊನ್ನೆ, ಬೀಟೆ, ಕರಿಮತ್ತೆ ಮುಂತಾದ ಬೆಲೆಬಾಳುವ ಮರಗಳ ಪೀಠೋಪಕರಣ ಸಂಪೂರ್ಣ ಸುಟ್ಟು ಕರಕಲಾಗಿದ್ದು ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ.
ತಡರಾತ್ರಿ ಸುರಿದ ಭೀಕರ ಮಳೆಗೆ ವಿದ್ಯುತ್ ಶಾರ್ಟ್ ಸರ್ಕೀಟ್ ಆಗಿರುವ ಶಂಕೆ ವ್ಯಕ್ತವಾಗಿದೆ. ವೆಸ್ಟ್ ಕೋಸ್ಟ್ ಪೇಪರ್ ಕಾರ್ಖಾನೆಯ ಅಗ್ನಿಶಾಮಕ ದಳ ಹಾಗೂ ಹಳಿಯಾಳದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದು ಬೆಳಗಿನ ಜಾವದವರೆಗೂ ಬೆಂಕಿ ಸಂಪೂರ್ಣ ಹತೋಟಿಗೆ ಬಂದಿರಲಿಲ್ಲ.
ಅಕ್ಕಪಕ್ಕದ ಕೆಲವು ಅಂಗಡಿಗಳಿಗೂ ಬೆಂಕಿ ತಾಗಿದ್ದು ಆಲ್ಪಸ್ವಲ್ಪ ಪ್ರಮಾಣದ ಹಾನಿ ಉಂಟಾಗಿದೆ.ಸ್ಥಳಕ್ಕೆ ಡಿವೈಎಸ್ಪಿ ಕೆ.ಎಲ್.ಗಣೇಶ, ಸಿಪಿಐ ಬಿ.ಎಸ್.ಲೋಕಾಪುರ, ಪಿಎಸ್ಐ ಕೃಷ್ಣ ಗೌಡ ಹರಿಕೇರಿ, ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.