ಇ-ಸ್ಕೂಟರ್ ಶೋರೂಂನಲ್ಲಿ ಬೆಂಕಿ ಅವಘಡ: 8 ಸಾವು, ಹಲವರಿಗೆ ಗಾಯ

Prasthutha|

ಹೈದರಾಬಾದ್: ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ತೆಲಂಗಾಣದ ಸಿಕಂದರಾಬಾದ್ ನಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

- Advertisement -

ಕಟ್ಟಡದ ನೆಲಮಹಡಿಯಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ನ ಚಾರ್ಜಿಂಗ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡುತ್ತಿದ್ದಂತೆಯೇ ಕನಿಷ್ಠ 25 ಅತಿಥಿಗಳು ತಂಗಿದ್ದ ಮೊದಲ ಮತ್ತು ಎರಡನೇ ಮಹಡಿಯಲ್ಲಿರುವ ರೂಬಿ ಹೋಟೆಲ್ ಗೆ ಬೆಂಕಿ ವ್ಯಾಪಿಸಿದೆ. ಹೊಗೆಯಿಂದಾಗಿ  ಉಸಿರುಗಟ್ಟಿ ಹೆಚ್ಚಿನ ಜನರು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿಶಾಮಕ ಇಲಾಖೆ ಕ್ರೇನ್ ಏಣಿಗಳನ್ನು ಬಳಸಿ ಹಲವಾರು ಜನರನ್ನು ರಕ್ಷಿಸಿದರೆ, ಕೆಲವು ಸ್ಥಳೀಯರು ಸಹ ಸೇರಿಕೊಂಡು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಕೆಲವು ಜನರು ಬೆಂಕಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಹೋಟೆಲ್ ಕಿಟಕಿಗಳಿಂದ ಹೊರಗೆ ಜಿಗಿದಿರುವ ವೀಡಿಯೋ ಕೂಡ ವೈರಲ್ ಆಗಿದೆ.

ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಸಿ.ವಿ.ಆನಂದ್ ತಿಳಿಸಿದ್ದಾರೆ.

ಘಟನೆಯ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ತೆಲಂಗಾಣ ಗೃಹ ಸಚಿವ ಮುಹಮ್ಮದ್ ಮೆಹ್ಮೂದ್ ಅಲಿ ಬೆಂಕಿ ಅವಘಡಕ್ಕೆ ಕಾರಣವನ್ನು ಪತ್ತೆಹಚ್ಚಲು ತನಿಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು



Join Whatsapp