ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ಧಾರವಾಡದಲ್ಲಿ ಎಫ್ ಐಆರ್ ದಾಖಲು

Prasthutha|

ಬೆಂಗಳೂರು: ಟಿವಿ ಸಂದರ್ಶನವೊಂದರಲ್ಲಿ ಹಿಜಾಬ್ ಸಂಬಂಧ ಹಿಂದುತ್ವವಾದಿಗಳ ವಿರುದ್ಧ ಹೇಳಿಕೆ ನೀಡಿದ್ದ ಲೇಖಕಿ, ಪತ್ರಕರ್ತೆ ರಾಣಾ ಅಯೂಬ್ ವಿರುದ್ಧ ಧಾರವಾಡ ಜಿಲ್ಲೆಯಲ್ಲಿ ಎಫ್ ಐಆರ್ ದಾಖಲಾಗಿದೆ.

- Advertisement -

ಧಾರ್ಮಿಕ ಭಾವನೆಯನ್ನು ಕೆರಳಿಸುವ ಭಾರತೀಯ ದಂಡ ಸಂಹಿತೆ 295ಎ ಸೆಕ್ಷನ್ ನಡಿ ಪ್ರಕರಣ ದಾಖಲು ಮಾಡಲಾಗಿದೆ. ಹಿಂದೂ ರಕ್ಷಕ ಎಂದು ಹೇಳಿಕೊಂಡಿರುವ ಹಿಂದೂ ಐಟಿ ಕೋಶದ ಅಶ್ವಥ್ ಎಂಬವರು ಈ ಸಂಬಂಧ ದೂರು ನೀಡಿದ್ದರು.

ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ರಾಣಾ ಅಯ್ಯೂಬ್ ಅವರು, ಕರ್ನಾಟಕದಲ್ಲಿ ಹಿಜಾಬ್ ವಿರುದ್ಧ ಗಲಾಟೆ ಮಾಡುತ್ತಿರುವವರು ಹಿಂದುತ್ವ ಭಯೋತ್ಪಾದಕರು ಎಂದು ಹೇಳಿದ್ದಾರೆ ಎಂದು ಅಶ್ವಥ್  ದೂರಿತ್ತಿದ್ದಾರೆ.

- Advertisement -

ದೂರಿನಲ್ಲಿ “ಈ ಹುಡುಗಿಯರು ಬಹು ಹಿಂದಿನಿಂದಲೂ ಹಿಜಾಬ್ ಧರಿಸಿ ಬರುತ್ತಿದ್ದಾರೆ. ಈಗ ಏಕಾ ಏಕಿ ಈ ಹುಡುಗರು, ಹಿಂದುತ್ವ ಭಯೋತ್ಪಾದಕರು ಒಳನುಗ್ಗಿ ಅದರ ವಿರುದ್ಧ ಗಲಾಟೆ ಮಾಡಿದ್ದಾರೆ. ವಿದ್ಯಾಲಯಗಳಲ್ಲಿ ಇವರು ಕೇಸರಿ ಬಾವುಟ ಹಾರಿಸುತ್ತಾರೆ. ಇದಕ್ಕೆ ಏನು ಅರ್ಥ? ಎಂದಿತ್ಯಾದಿಯಾಗಿ ರಾಣಾ ಹೇಳಿದ್ದಾಗಿ ದೂರಿನಲ್ಲಿ ಹೇಳಲಾಗಿದೆ.

ಹಾಗಾಗಿ ಫೆಬ್ರವರಿ 21ರಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮಾರ್ಚ್ 4ರ ಶುಕ್ರವಾರ ಎಫ್ಐಆರ್ ದಾಖಲಾಗಿದೆ. ರಾಣಾ ಅಯ್ಯೂಬ್ ಹೇಳಿಕೆ ವಿರುದ್ಧ ಐಟಿ ಸೆಲ್ ನವರು ಐದು ದೂರುಗಳನ್ನು ನೀಡಿದ್ದಾರೆ. ರಾಣಾ ಅಯೂಬ್ ಯೂಟ್ಯೂಬ್ ಎಕೌಂಟ್ ನಲ್ಲಿ ಫೆಬ್ರವರಿ 10ರಂದು ಸಂದರ್ಶನದ ವೀಡಿಯೋ  ಅಪ್ ಲೋಡ್ ಆಗಿರುವುದನ್ನು  ದೂರುದಾರರು ಹೇಳಿದ್ದಾರೆ. ಶಾಲೆಗಳಲ್ಲಿ ಹಿಜಾಬ್ ಗೆ ಇತ್ತೀಚೆಗೆ ಅವಕಾಶ ನೀಡದಿರುವುದರ ಬಗ್ಗೆ ಈ ಸಂದರ್ಶನದಲ್ಲಿ ಉತ್ತರಿಸಲಾಗಿದೆ.

ರಾಣಾ ಅಯ್ಯೂಬ್ ಅವರು ಟ್ವಿಟರ್ ನಲ್ಲಿ ಈ ಬಗ್ಗೆ “ನನ್ನ ವಿರುದ್ಧ ಕರ್ನಾಟಕದಲ್ಲಿ ಇನ್ನೊಂದು ಮೊಕದ್ದಮೆ ದಾಖಲಾಗಿದೆ. ಅದೇ ಕರ್ನಾಟಕದ ಬಲ ಪಂಥೀಯ ಹಿಂದುತ್ವವಾದಿಗಳು. ಸರಕಾರ ಮತ್ತು ಅವರ ಆಪ್ತರಿಗೆ ನಾನು ಹೇಳುವುದು ಇಷ್ಟೆ, ಇದಕ್ಕೆಲ್ಲ ಹೆದರಿ ನಾನು ಸತ್ಯ ಹೇಳುವುದನ್ನು ನಿಲ್ಲಿಸುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಚಾರಿಟಿಯ ಹೆಸರಿನಲ್ಲಿ ರಾಣಾ ಅಯ್ಯೂಬ್ ಅವರು ಅಕ್ರಮವಾಗಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕಳೆದ ವರುಷ ಹಿಂದೂ ಐಟಿ ಕೋಶದ ಸಹ ಸಂಸ್ಥಾಪಕ ಉತ್ತರ ಪ್ರದೇಶದಲ್ಲಿ ರಾಣಾ ಅಯ್ಯೂಬ್ ಮೇಲೆ ದೂರು ದಾಖಲಿಸಿದ್ದರು. ಕೆಟ್ಟೊ ಎಂಬ ಆನ್ ಲೈನ್ ಕ್ರೌಡ್ ಫಂಡಿಂಗ್ ವೇದಿಕೆಯಿಂದ ರಾಣಾ ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು ಇಡಿ- ಜಾರಿ ನಿರ್ದೇಶನಾಲಯವು ರಾಣಾ ಅಯ್ಯೂಬ್ ರ ಖಾತೆಗಳಲ್ಲಿ ಇದ್ದ ರೂ. 1.77 ಕೋಟಿ ರೂಪಾಯಿಗಳನ್ನು ಲಾಕ್ ಮಾಡಿದೆ.



Join Whatsapp