ಮಂಗಳೂರು: ನಿರಂತರ ಕೋಮು ಸಂಘರ್ಷಕ್ಕೀಡಾದ ಜಿಲ್ಲೆಯಲ್ಲಿ ‘ತಲವಾರು ದಾಳಿ’ಯೆಂಬ ಕಟ್ಟು ಕಥೆ ಹೆಣೆದು ಜಿಲ್ಲೆಯಲ್ಲಿ ಮತ್ತಷ್ಟು ಭೀತಿಗೆ ಕಾರಣವಾಗಿದ್ದವನ ಮೇಲೆ ಇದೀಗ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಲು ಸಾಲು ಕೊಲೆಗಳ ನಡುವೆ ಬಿಜೆಪಿ ಕಾರ್ಯಕರ್ತ, ಉಚ್ಚಿಲ ನಿವಾಸಿ ಕಿಶೋರ್ ಎಂಬಾತ ತನ್ನ ಬೇಳೆ ಬೇಯಿಸಲು ಹೊರಟಿದ್ದ. ಇದಕ್ಕಾಗಿ ಆತ ತನ್ನನ್ನು ಯಾರೋ ಮಾರಕಾಸ್ತ್ರಗಳಿಂದ ಬೆನ್ನಟ್ಟಿ ದಾಳಿಗೆ ಯತ್ನಿಸಿದ್ದಾರೆ ಎಂದು ಕಥೆ ಸೃಷ್ಟಿಸಿ ಜನರ ನಡುವೆ ಭೀತಿ ಸೃಷ್ಟಿಸಿದ್ದ.
ಈತನ ಹೇಳಿಕೆ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಉಳ್ಳಾಲ ಪೊಲೀಸರು ಕಿಶೋರ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ತನ್ನ ಮೇಲೆ ಯಾವುದೇ ದಾಳಿ ನಡೆದಿಲ್ಲ. ತಾನು ಕಟ್ಟು ಕಥೆ ಸೃಷ್ಟಿಸಿರುವುದಾಗಿ ಕಿಶೋರ್ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದ. ಬಳಿಕ ಪೊಲೀಸರು ಆತನನ್ನು ಮುಚ್ಚಳಿಕೆ ಬರೆಸಿ ಎಚ್ಚರಿಕೆ ನೀಡಿ ಕಳಿಸಿದ್ದರು.
ಆದರೆ ಇದೀಗ ಆತ ಭೀತಿ ಸೃಷ್ಟಿಸಿ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿರುವ ಹಿನ್ನೆಲೆಯಲ್ಲಿ ಕಾಯ್ದೆ 107ರಡಿ ಶಾಂತಿಭಂಗ ಪ್ರಕರಣ ದಾಖಲು ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.