ತಸ್ತಿಕ್ ಹಣ ಹೆಚ್ಚಳಕ್ಕೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಸಚಿವೆ ಶಶಿಕಲಾ ಜೊಲ್ಲೆ

Prasthutha|

ಬೆಳಗಾವಿ: ರಾಜ್ಯದಲ್ಲಿ 34,219 ಸಿ ದರ್ಜೆಯ ದೇವಸ್ಥಾನಗಳಿವೆ. ಅವುಗಳ ಆದಾಯ ಕಡಿಮೆ ಇರುವ ಹಿನ್ನೆಲೆಯಲ್ಲಿ ಆ ದೇವಸ್ಥಾನಗಳ ಅಭಿವೃದ್ಧಿಗೆ ಅಭಿಯಾನ ರೂಪಿಸುವುದಾಗಿ ಮುಜರಾಯಿ, ಹಜ್ ಮತ್ತು ವಕ್ಫ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಇಂದು ಬೆಳಗಾವಿ ವಿಧಾನಸೌಧದಲ್ಲಿ ಪರಿಷತ್ತಿನ ಕಲಾಪದಲ್ಲಿ ಸದಸ್ಯೆ ಡಾ. ತೇಜಸ್ವಿನಿ ಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು,

- Advertisement -


ದೇವಸ್ಥಾನಗಳ ಆದಾಯದ ಮೇಲೆ ಎ, ಬಿ ಮತ್ತು ಸಿ ಗ್ರೇಡ್ ಎಂದು ವರ್ಗಗಳನ್ನು ಮಾಡಲಾಗಿದೆ. ಎ ಮತ್ತು ಬಿ ದರ್ಜೆಯ ದೇವಸ್ಥಾನಗಳ ಆದಾಯ ಹೆಚ್ಚಾಗಿರುವುದರಿಂದ ಅವುಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ತೊಂದರೆ ಇಲ್ಲ. ಆದರೆ, ರಾಜ್ಯದಲ್ಲಿರುವ 34,219 ಸಿ ದರ್ಜೆಯ ದೇವಸ್ಥಾನಗಳ ಅಭಿವೃದ್ದಿಗೆ ಸಾಮಾನ್ಯ ಸಂಗ್ರಹಣ ನಿಧಿಯಲ್ಲಿರುವ ಹಣ ಸಾಕಾಗುತ್ತಿಲ್ಲ. ಈ ನಿಟ್ಟಿನಲ್ಲಿ ಅವುಗಳ ಅಭಿವೃದ್ದಿಗೆ ಭಕ್ತರ ಸಹಾಯ ಪಡೆದುಕೊಳ್ಳುವ ಅಭಿಯಾನ ಪ್ರಾರಂಭಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.


ಸೂಕ್ತ ಆದಾಯವಿಲ್ಲದ ದೇವಸ್ಥಾನಗಳು ಮತ್ತು ಧರ್ಮದಾಯ ಸಂಸ್ಥೆಗಳ ಸಂರಕ್ಷಣೆಗಾಗಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, 1997 ಕಲಂ 21 ಎಫ್ ಅಡಿಯಲ್ಲಿ ದೇವಾಲಯಗಳನ್ನು ದತ್ತು ತಗೆದುಕೊಂಡು ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ದಾನಿಗಳಿಗೆ ದೇವಸ್ಥಾನಗಳನ್ನು ದತ್ತು ನೀಡುವುದು ಅಥವಾ ಅಭಿವೃದ್ದಿಪಡಿಸಲು ಧನಸಹಾಯ ಮಾಡುವವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಭಿಯಾನ ನಡೆಸುವುದಾಗಿ ತಿಳಿಸಿದರು.

- Advertisement -


ತಸ್ತಿಕ್ ಹಣ ಹೆಚ್ಚಳಕ್ಕೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ:
ಪ್ರತಿ ತಿಂಗಳು 4 ಸಾವಿರದಂತೆ ವಾರ್ಷಿಕವಾಗಿ 48 ಸಾವಿರ ರೂಪಾಯಿಗಳ ತಸ್ತಿಕ್ ಹಣವನ್ನು ನೀಡಲಾಗುತ್ತಿದೆ. ಈ ಹಣ ಬಹಳ ಕಡಿಮೆಯಿದ್ದು ಹೆಚ್ಚಿಸುವಂತೆ ಅರ್ಚಕರ ಸಂಘಟನೆಗಳಿಂದ ಅನೇಕ ಮನವಿ ಬಂದಿವೆ. ಇದರ ಬಗ್ಗೆ ಈಗಾಗಲೇ ನಾವು ಸೂಕ್ತ ಗಮನ ಹರಿಸಿದ್ದು ತಸ್ತಿಕ್ ಹಣ ಹೆಚ್ಚಳಕ್ಕೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದರು.


ಪುರಾತನ – ಪ್ರಾಚೀನ ದೇವಾಲಯ ಕಟ್ಟಡ ಸಂರಕ್ಷಣೆಗೆ ಅನುದಾನ:
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳಪಡುವ ಪುರಾತನ-ಪ್ರಾಚೀನ ದೇವಾಲಯ ಕಟ್ಟಡಗಳ ಸಂರಕ್ಷಣೆಗೆ ಸರಕಾರದಿಂದ ಕಾಲಕಾಲಕ್ಕೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಹಾಗೆಯೇ ದುರಸ್ತಿಗೆ ಸಾಮಾನ್ಯ ಸಂಗ್ರಹಣೆ ನಿಧಿಯಿಂದ ಹಣ ಮಂಜೂರು ಮಾಡಿ ದುರಸ್ತಿಪಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.


ಕಾಶಿ ಯಾತ್ರೆಗೆ ಸಹಾಯಧನ ನೀಡುವ ಯೋಜನೆ ಪ್ರಾರಂಭದ ಭರವಸೆ:
ಪ್ರಧಾನಿ ನರೇಂದ್ರ ಮೋದಿ ಅವರು ಮುತುವರ್ಜಿಯಿಂದ ಕಾಶಿಯನ್ನು ಇನ್ನಷ್ಟು ಸುಂದರಗೊಳಿಸಿದ್ದಾರೆ. ಕಾಶಿ ಈಗ ಮತ್ತಷ್ಟು ಭವ್ಯ ಹಾಗೂ ದಿವ್ಯವಾಗಿದೆ. ರಾಜ್ಯದಿಂದ ಕೈಲಾಸ ಮಾನಸ ಸರೋವರ ಮತ್ತು ಚಾರ್ ಧಾಮ್ ಯಾತ್ರೆಗಳನ್ನು ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಈಗಾಗಲೇ ಸಹಾಯಧನ ವಿತರಿಸಲಾಗುತ್ತದೆ. ಇದೇ ರೀತಿಯಲ್ಲಿ ಕಾಶಿ ಯಾತ್ರೆಗೂ ಇದನ್ನು ವಿಸ್ತರಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.



Join Whatsapp