ಬೇಕಲ್ ಉಸ್ತಾದರ ದಫನ ಕ್ರಿಯೆ | ಹರಿದು ಬಂದ ಜನಸಾಗರ

Prasthutha|

ಇಂದು ಬೆಳಗ್ಗೆ ನಿಧನರಾದ ಅಲ್ಹಾಜ್ ಪಿ.ಎಂ.ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ರವರ ದಫನ ಕಾರ್ಯವು ಮೋಂಟುಗೋಳಿ ಸಮೀಪದ ಮರಿಕ್ಕಳ ಜುಮಾ ಮಸೀದಿಯ ಖಬರಸ್ಥಾನದಲ್ಲಿ ರಾತ್ರಿ ಸುಮಾರು 8 ಗಂಟೆಗೆ ನಡೆಯಿತು. ಈ ಸಂದರ್ಭದಲ್ಲಿ ಬೇಕಲ್ ಉಸ್ತಾದರ ಸಾವಿರಾರು ಶಿಷ್ಯಂದಿರು, ಅಭಿಮಾನಿ ವರ್ಗ, ಧಾರ್ಮಿಕ ಗುರುಗಳು, ಸಾಮಾಜಿಕ ಮತ್ತು ರಾಜಕೀಯ ಮುಖಂಡರು ಸೇರಿದಂತೆ ಜನಸಾಗರವೇ ನೆರೆದಿತ್ತು.

ಕರ್ನಾಟಕ ರಾಜ್ಯ ಸುನ್ನಿ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಯ್ಯಿತ್ ನಮಾಝ್‌ನ ನೇತೃತ್ವ ವಹಿಸಿದ್ದರು.

- Advertisement -

ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ, ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ, ಸೈಯದ್ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಲ್, ಆಲಿಕುಂಞಿ ಉಸ್ತಾದ್, ಪೆರುವಾಯಿ ತಂಙಳ್, ಡಾ. ಕಾವಳಕಟ್ಟೆ ಹಝ್ರತ್ ಮತ್ತಿತರ ಪ್ರಮುಖರು ಸಹಿತ ಸಾವಿರಾರು ಮಂದಿ ಮೃತರ ಅಂತಿಮ ದರ್ಶನ ಪಡೆದರು.

ಬೇಕಲ್ ಉಸ್ತಾದರ ಅಗಲುವಿಕೆಗೆ ಮಿಡಿದ ಸಾಮಾಜಿಕ-ಧಾರ್ಮಿಕ-ರಾಜಕೀಯ ಮುಖಂಡರು

ಎಲ್ಲರನ್ನೂ ಪ್ರೀತಿಯಿಂದ  ಕಾಣುತ್ತಿದ್ದ ಬೇಕಲ ಉಸ್ತಾದರು ಸಮುದಾಯದ ಎಲ್ಲಾ ವರ್ಗಗಳ  ಗೌರವಕ್ಕೆ ಪಾತ್ರರಾಗಿದ್ದರು. ಅವರ ಮರಣವು ಸಮುದಾಯಕ್ಕೆ ದೊಡ್ಡ ನಷ್ಟ ಉಂಟು ಮಾಡಲಿದೆ.
– ಕೆ‌.ಎಸ್.ಮಸೂದ್
ಮಾಜಿ ರಾಜ್ಯಸಭಾ ಸದಸ್ಯರು ಮತ್ತು ಮಾಜಿ ಅಧ್ಯಕ್ಷರು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗ

ಬೇಕಲ್ ಉಸ್ತಾದರು ಧರ್ಮದ ಸೋಗಿನಲ್ಲಿ ನಡೆಯುತ್ತಿರುವ ಅನಗತ್ಯ ಆಚಾರ-ವಿಚಾರಗಳನ್ನು ವಿರೋಧಿಸುತ್ತಿದ್ದರಲ್ಲದೆ, ಗ್ರೂಪಿನ ಲೇಬಲಿನಲ್ಲಿ ಮಾಡುವ ಎಲ್ಲಾ ಕೃತ್ಯಗಳನ್ನು ಒಪ್ಪಿಕೊಳ್ಳಲಾಗದೆಂದು ಖಡಕ್ ಆಗಿ ಹೇಳಿ ಬಿಡುತ್ತಿದ್ದರು. ವರ್ಣ ರಂಜಿತ ಮತ್ತು ಮಾದರಿಯುಕ್ತ ಬದುಕನ್ನು ಸವೆಸಿದ ಬೇಕಲ ಇಬ್ರಾಹಿಂ ಉಸ್ತಾದ್ ಕರ್ನಾಟಕದ ಇಸ್ಲಾಮಿಕ್ ಧಾರ್ಮಿಕ ಕ್ಷೇತ್ರದಲ್ಲಿ ಅಚ್ವಳಿಯದ ಸ್ಮರಣೆಯನ್ನು ಉಳಿಸಿ ಹೋಗಿದ್ದಾರೆ.
ಎಸ್.ಬಿ.ದಾರಿಮಿ, ಖತೀಬರು, ಮುಲ್ಕಿ ಶಾಫೀ ಜಮಾಅತ್

‘ತಾಜುಲ್ ಫುಕಹಾಹ್’ ಎಂಬ ಬಿರುದನ್ನು ಪಡೆದಿದ್ದ ಉಸ್ತಾದರು,  ಇಸ್ಲಾಮಿನ ಜ್ಯೋತಿರ್ವಿಜ್ಞಾನದಲ್ಲೂ ಉತ್ತಮ ಜ್ಞಾನವನ್ನು ಹೊಂದಿದ್ದರು.  ಅವರೋರ್ವ ಕರ್ಮಶಾಸ್ತ್ರದ ಮೇರು ವಿದ್ವಾಂಸರಾಗಿದ್ದರು  ಮಾತ್ರವಲ್ಲ, ಕರ್ಮಶಾಸ್ತ್ರದ ಕುರಿತ ಸಂಶಯಗಳನ್ನು ಪರಿಹರಿಸಿಕೊಳ್ಳಲು ವಿದ್ವಾಂಸರು ಅವರನ್ನು ಪಕ್ಷಾತೀತವಾಗಿ ಭೇಟಿಯಾಗುತ್ತಿದ್ದರು. ಅಪಾರ ಜ್ಞಾನಿಯಾಗಿದ್ದ ಬೇಕಲ್ ಉಸ್ತಾದರ ನಿಧನವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.
ಇಜಾಝ್ ಅಹ್ಮದ್, ಜಿಲ್ಲಾಧ್ಯಕ್ಷರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ದ.ಕ. ಜಿಲ್ಲೆ

ಸರಳ ವ್ಯಕ್ತಿತ್ವವನ್ನು ಹೊಂದಿದ್ದ ಬೇಕಲ್ ಉಸ್ತಾದ್, ಮಹಾನ್ ವಿದ್ವಾಂಸರಾಗಿದ್ದರು. ಮುಸ್ಲಿಮ್ ಸಮುದಾಯಕ್ಕೆ ಉತ್ತಮ ನಾಯಕತ್ವ ಮತ್ತು ಮಾರ್ಗದರ್ಶನವನ್ನು ನೀಡುತ್ತಿದ್ದ ಅವರ ಅಗಲುವಿಕೆಯು  ಸಮುದಾಯಕ್ಕೆ ತುಂಬಲಾರದ ನಷ್ಟವಾಗಲಿದೆ.
ಮುಹಮ್ಮದ್ ಕುಂಞ, ಕಾರ್ಯದರ್ಶಿ, ಜಮಾಅತ್ ಇಸ್ಲಾಮಿ ಹಿಂದ್

ಬೇಕಲ್ ಉಸ್ತಾದರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ.
ಯಾಸೀನ್ ಮಲ್ಪೆ ಅಧ್ಯಕ್ಷರು, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ

ಕರ್ನಾಟಕದ ಪಂಡಿತ ಪರಂಪರೆಯ ಅವಿಸ್ಮರಣೀಯ ವ್ಯಕ್ತಿತ್ವ ನಮ್ಮಿಂದ ಇಂದು ಅಗಲಿದೆ. ಘನ ಪಾಂಡಿತ್ಯ, ಮೇರು ವ್ಯಕ್ತಿತ್ವ, ಆಕರ್ಷಕ ನಡೆ ನುಡಿ ಅವರ ಮಾದರಿ ಗುಣಗಳಾಗಿತ್ತು. ಸಂಘಟನಾ ಅಂತರವನ್ನು ಮೀರಿ ಅವರನ್ನು ಬಹಳ ಪ್ರೀತಿಸಿದವರಲ್ಲಿ ನಾನೂ ಓರ್ವ. ಅಲ್ಲಾಹು ಅವರ ಆಖಿರಾದ ದರಜ ಉನ್ನತಿಗೇರಿಸಲಿ.
ಅನೀಸ್ ಕೌಸರಿ, ರಾಜ್ಯಾಧ್ಯಕ್ಷರು SKSSF

ಬೇಕಲ್ ಉಸ್ತಾದರನ್ನು ನಾನು ನನ್ನ ಸ್ವಂತ ಉಸ್ತಾದರಂತೆ ಗೌರವಿಸಿದವನು. ಮಂಗಳೂರಿನಿಂದ ಸೌದಿ ಅರೇಬಿಯಾಕ್ಕೆ ಹಜ್ ವ್ಯವಸ್ಥೆ ಕಲ್ಪಿಸುವಲ್ಲಿ ಉಸ್ತಾದರ ಶ್ರಮವನ್ನು ನಾನು ಕಣ್ಣಾರೆ ಕಂಡವನು. ಉಸ್ತಾದರ ಮರಣ ನಮ್ಮೆಲ್ಲರಿಗೂ ತುಂಬಲಾರದ ನಷ್ಟ.
ಮೊಯಿದಿನ್ ಬಾವಾ, ಮಾಜಿ ಶಾಸಕರು

ಉಸ್ತಾದರ ಮರಣ ಉಲೆಮಾ ಸಮೂಹಕ್ಕೆ ಮಾತ್ರವಲ್ಲ, ಇಡೀ ಸಮುದಾಯಕ್ಕೆ ಬೃಹತ್ ನಷ್ಟ.
ಶಾಫಿ ಸಅದಿ, ರಾಜ್ಯ  ಮುಖಂಡರು, ಕರ್ನಾಟಕ ಮುಸ್ಲಿಮ್ ಜಮಾಅತ್

ಕರ್ಮಶಾಸ್ತ್ರ, ಖಗೋಳ ಶಾಸ್ತ್ರ ಮತ್ತು ಇನ್ನಿತರ ಹಲವು ವಿಚಾರಗಳಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದ ಬೇಕಲ ಉಸ್ತಾದರ ಅಗಲುವಿಕೆಯು ಸಮಾಜಕ್ಕೆ ಮತ್ತು ಪ್ರಮುಖವಾಗಿ ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.
ಶಾಹುಲ್ ಎಸ್.ಎಚ್., ಪ್ರಧಾನ ಕಾರ್ಯದರ್ಶಿ, SDPI ದ.ಕ.ಜಿಲ್ಲೆ

ಶ್ರೇಷ್ಠ ವಿದ್ವಾಂಸರಾಗಿದ್ದ ಬೇಕಲ ಉಸ್ತಾದರು ಅತ್ಯುತ್ತಮ ಕುರಾನ್ ಪಾಂಡಿತ್ಯವನ್ನು ಹೊಂದಿದ್ದರು. ಅವರು ಹಲವು ಸಂಘ ಸಂಸ್ಥೆಗಳ‌ಲ್ಲಿ ಕೆಲಸ ಮಾಡುತ್ತಾ ಸಮುದಾಯದ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಮರಣ ಸಮುದಾಯಕ್ಕೆ ದೊಡ್ಡ ನಷ್ಟವಾಗಿದೆ.
ಮುಹಮ್ಮದ್ ಬ್ಯಾರಿ, ಅಧ್ಯಕ್ಷರು, ಉಡುಪಿ ಮತ್ತು ದ.ಕ ಜಿಲ್ಲಾ ಮುಸ್ಲಿಂ ಇನ್ ಸ್ಟಿಟ್ಯೂಶನ್ಸ್ ಫೆಡರೇಶನ್ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟ

ಬೇಕಲ ಉಸ್ತಾದರು ಸಮುದಾಯದ ಎಲ್ಲಾ ಭಿನ್ನಾಭಿಪ್ರಾಯಗಳ ಮಧ್ಯೆಯೂ ಎಲ್ಲರನ್ನೂ ಒಟ್ಟಾಗಿ  ಕೊಂಡೊಯ್ಯುವ ಶಕ್ತಿಯನ್ನು ಹೊಂದಿದ್ದರು.
ಕೆ.ಎಂ.ಶರೀಫ್, ಕೋಶಾಧಿಕಾರಿ, ಹಿರಾ ಎಜುಕೇಶನಲ್ ಇನ್ ಸ್ಟಿಟ್ಯೂಟ್

- Advertisement -