ಬಿಲ್ಕಿಸ್ ಬಾನುಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಕೆ: ಬೆಂಗಳೂರಿನಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಪ್ರಗತಿಪರ ಸಂಘಟನೆಗಳು

Prasthutha|

ಬೆಂಗಳೂರು: ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗುಜರಾತ್ ಸರ್ಕಾರ ʻಸನ್ನಡತೆʼ ಆಧಾರದಲ್ಲಿ ಬಿಡುಗಡೆ ಮಾಡಿರುವುದನ್ನು ವಿರೋಧಿಸಿ, ಈ ಕೂಡಲೇ ಅಪರಾಧಿಗಳನ್ನು ಜೈಲಿಗೆ ಕಳುಹಿಸಬೇಕು ಎಂದು ಬೆಂಗಳೂರಿನಲ್ಲಿ ಮಹಿಳಾ, ವಿದ್ಯಾರ್ಥಿ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

- Advertisement -


‘ಬಿಲ್ಕಿಸ್ ಜೊತೆಯಲ್ಲಿದೆ ಕರ್ನಾಟಕ’ ಎಂಬ ಬ್ಯಾನರ್ ಅಡಿಯಲ್ಲಿ ರಾಜ್ಯದ ಮಹಿಳಾ, ವಿದ್ಯಾರ್ಥಿ ಹಾಗೂ ಪ್ರಗತಿಪರ ಸಂಘಟನೆಗಳು ಇಂದು ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಿದವು.
ʻಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರʼ, ಈ ಕೂಡಲೇ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಂಧಿಸಬೇಕುʼ, ʻಬಿಲ್ಕಿಸ್ ಬಾನು ಜೊತೆ ನಾವಿದ್ದೇವೆʼ ಎಂಬ ಆಕ್ರೋಶದ, ಸರ್ಕಾರದ ವಿರುದ್ಧದ ಘೋಷಣೆಗಳು ಇಡೀ ಪ್ರತಿಭಟನೆಯಲ್ಲಿ ಮೊಳಗಿದವು. ಮಕ್ಕಳು, ಯುವಜನರು, ತಾಯಂದಿರು, ಸಾರ್ವಜನಿಕರು, ಮಹಿಳಾಪರ ಆಲೋಚನೆಯುಳ್ಳ ಎಲ್ಲರೂ ಸೇರಿ ಬಿಲ್ಕಿಸ್ ಬಾನು ಅವರಿಗಾಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸುವಂತೆ ಬಿಜೆಪಿ ಸರ್ಕಾರವನ್ನು ಆಗ್ರಹಿಸಿದರು.


ʻʻ70ರ ದಶಕದ ಮಥುರಾ, ಭನ್ವಾರಿ ದೇವಿ, ಕರ್ನಾಟಕದ ಪ್ರೇಮಲತಾ ಸೇರಿದಂತೆ ಇಂದಿನ ಬಿಲ್ಕಿಸ್ ಬಾನು ಪ್ರಕರಣದಲ್ಲಿ ಆರೋಪ ಸಾಬೀತಾಗಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದರೂ ಅದರಿಂದ ಬಿಡುಗಡೆ ಮಾಡಲಾಗಿದೆ. ಈ ದೇಶದಲ್ಲಿ ಮಹಿಳಾ ಪರವಾದ ಆಲೋಚನೆಗಳನ್ನು ಛಿದ್ರಗೊಳಿಸುವ ರಾಜಕಾರಣ ನಡೆಯುತ್ತಿದೆ. ದೇಶದ ನಾಗರಿಕತೆಯನ್ನು ಇಂಚಿಂಚಾಗಿ ಕೊಲ್ಲುತ್ತಾ ಇರುವವರು, ಪ್ರಜಾಪ್ರಭುತ್ವದಲ್ಲಿ ಮತದಾನದ ಮೂಲಕ ಆಯ್ಕೆಯಾಗಿ ಬರುತ್ತಿದ್ದಾರೆ. ಅವರು ಹೇಗೆ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂಬುದನ್ನು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಕೋಮುವಾದ, ಮೂಲಭೂತವಾದದ ಮೂಲಕ ಫ್ಯಾಸಿಸಂ ಅನ್ನು ಬಹುತ್ವ ಭಾರತದಲ್ಲಿ ಬೇರೂರಿಸಲು ಪ್ರಯತ್ನಿಸುತ್ತಿರುವಾಗ ಬಿಲ್ಕಿಸ್ ಬಾನು ಅವರಿಗೆ ನ್ಯಾಯ ಕೇಳುವುದು ಎಂದರೆ ದೇಶದ ಸಂವಿಧಾನವನ್ನು ರಕ್ಷಣೆ ಮಾಡಿದಂತೆʼʼ ಎಂದು ಹೇಳಿದ ಜನವಾದಿ ಮಹಿಳಾ ಸಂಘಟನೆಯ ಕೆ ಎಸ್ ವಿಮಲಾ, ಅಪರಾಧಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿದರು.

- Advertisement -


ದೇಶದಲ್ಲಿ ಬಡತನ, ನಿರುದ್ಯೋಗದಿಂದ ಯುವಜನರು ಕಂಗೆಟ್ಟಿದ್ದಾರೆ. ದಲಿತರು, ದಮನಿತರು, ದುಡಿಯುವ ಜನ, ಅಲ್ಪಸಂಖ್ಯಾತರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಅವರ ‘ಭೇಟಿ ಬಚಾವೋ, ಭೇಟಿ ಪಡಾವೋ’ ಹೇಳಿಕೆಗಳು ಕಿವಿಗೆ ತಂಪೆರೆಯದೇ ಕಾದ ಸೀಸದ ತರಹ ಕಿವಿಯನ್ನು ಮುಚ್ಚುತ್ತಿವೆ. ಅವಮಾನ ಮಾಡುತ್ತಿರುವ ನಿಮಗೆ ಪ್ರಜಾಪ್ರಭುತ್ವ ದೇಶದ ಪ್ರಧಾನಿಯಾಗಲು ನಿಜವಾಗಿಯೂ ಅರ್ಹತೆ ಇಲ್ಲ. ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ʻಸನ್ನಡತೆʼ ಆಧಾರದಲ್ಲಿ ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಅರ್ಜಿ ಸಲ್ಲಿಸಲಾಗಿದೆ” ಎಂದು ಅವರು ವಿವರಿಸಿದರು. “ಅಪರಾಧಗಳನ್ನು ಬಿಡುಗಡೆ ಮಾಡಿ ಇಂದಿಗೆ ಹನ್ನೆರಡು ದಿನಗಳಾಗಿವೆ. ಈವರೆಗೂ ನರೇಂದ್ರ ಮೋದಿ ಈ ಅಪರಾಧದ ಬಗ್ಗೆ ಮಾತನಾಡಿಲ್ಲ” ಎಂದು ಅವರು ಮೋದಿ ನಡೆಯನ್ನು ಟೀಕಿಸಿದರು.
“ಅಮೃತ ಮಹೋತ್ಸವದ ಹೆಸರಿನಲ್ಲಿ ದೇಶದ ಮಹಿಳೆಯರಿಗೆ ಕೇಂದ್ರ ಸರ್ಕಾರ ಕೊಟ್ಟಿರುವುದು ವಿಷೋತ್ಸವ. ಈವರೆಗಿನ ಎಲ್ಲ ಅತ್ಯಾಚಾರ ಪ್ರಕರಣಗಳ ಬಗ್ಗೆ ಇಡೀ ಸಮಾಜ ತಲೆ ತಗ್ಗಿಸಬೇಕಾಗಿದೆ. ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಗುಜರಾತ್ ಸರ್ಕಾರ ಆಗಸ್ಟ್ 15 ರಂದು ನೀಡಿರುವ ತೀರ್ಮಾನವನ್ನು ನಾವೆಲ್ಲರೂ ವಿರೋಧಿಸುತ್ತೇವೆ. ಬಿಲ್ಕಿಸ್ ಬಾನು ಅವರಿಗೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ” ಎಂದು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಹೋರಾಟಗಾರ್ತಿ ಅಕೈ ಪದ್ಮಸಾಲಿ ತಿಳಿಸಿದರು.


“ಸಾಮೂಹಿಕ ಅತ್ಯಾಚಾರವೆಸಗಿ ಕೊಂದವರ ಶಿಕ್ಷೆಯನ್ನು ಮೊಟಕುಗೊಳಿಸಿದಂತಹ ಅಮಾನವೀಯ ಕೃತ್ಯವನ್ನು ನಾನು ಹಿಂದೆದೂ ಕಂಡಿಲ್ಲ. ಇದು ಸಂವಿಧಾನ ವಿರೋಧಿ ನಡೆ. ಡ್ರಗ್ಸ್, ಮಾನವ ಕಳ್ಳ ಸಾಗಣೆ, ಭಯೋತ್ಪಾದನೆ, ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವವರನ್ನು ಬಿಡುಗಡೆ ಮಾಡುವಂತಿಲ್ಲ ಎಂಬ ಕೇಂದ್ರ ಸರ್ಕಾರದ ನಿಯಮವೊಂದು ಜಾರಿಯಲ್ಲಿದೆ. ಈ ನಿಯಮಕ್ಕೆ ವಿರುದ್ಧವಾಗಿ ಸರ್ಕಾರ ತೀರ್ಪು ಕೊಡುವುದನ್ನು ಈ ದೇಶದ ಪ್ರಜೆಯಾಗಿ ನಾವೆಲ್ಲರೂ ಪ್ರಶ್ನಿಸಬೇಕು” ಎಂದು ಹಿರಿಯ ವಕೀಲ ಬಿ ಟಿ ವೆಂಕಟೇಶ್ ತಿಳಿಸಿದರು.


ಜನಪರ ಕವಿ ಮಮತಾ ಜಿ ಸಾಗರ್, ಚಾಂದ್ ಪಾಷಾ, ಸಿದ್ಧಾರ್ಥ್, ನಂದಿನಿ, ಮುಜಾಫಿರ್ ಕವಿತೆ ವಾಚನ ಮಾಡುವ ಮೂಲಕ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿರುವುದನ್ನು ವಿರೋಧಿಸಿ, ಈ ಕೂಡಲೇ ಅವರನ್ನು ಮತ್ತೆ ಬಂಧಿಸುವಂತೆ ಒತ್ತಾಯಿಸಿ ಸಹಿ ಸಂಗ್ರಹ ಆಂದೋಲನವನ್ನು ನಡೆಸಲಾಯಿತು.
ಕಾಂಗ್ರೆಸ್ ಎಂಎಲ್ಎ ಸೌಮ್ಯ ರೆಡ್ಡಿ ಸಾಮಾಜಿಕ ಹೋರಾಟಗಾರರಾದ ಅಖಿಲಾ ವಾಸನ್, ಮೈತ್ರೇಯಿ, ಸಾಹಿತಿ ಕೆ. ರಾಮಯ್ಯ, ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ವಿನಯ್ ಶ್ರೀನಿವಾಸನ್, ಸ್ಲಂ ಜನಾಂದೋಲನದ ಚಂದ್ರಮ್ಮ, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಹೋರಾಟಗಾರರಾದ ನಿಶಾ ಗುಳೂರು, ಚಾಂದಿನಿ, ಸೇರಿದಂತೆ ಹಲವಾರು ಮಹಿಳಾ, ಕಾರ್ಮಿಕ, ವಿದ್ಯಾರ್ಥಿ, ಯುವ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
2002ರ ಗುಜರಾತ್ ಕೋಮು ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಅವರ ಕುಟುಂಬದ ಸದಸ್ಯರ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗಳಿಗೆ ಸಂಬಂಧಿಸಿದ ಪ್ರಕರಣದ 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಗುಜರಾತ್ ಸರ್ಕಾರವು ಕ್ಷಮಾಪಣಾ ನೀತಿ ಹೆಸರಲ್ಲಿ ಈ ಎಲ್ಲ ಅಪರಾಧಿಗಳನ್ನು ಆಗಸ್ಟ್ 15ರಂದು ಗೋಧ್ರಾ ಉಪ ಕಾರಾಗೃಹದಿಂದ ಬಿಡುಗಡೆ ಮಾಡಿದೆ.

Join Whatsapp