ಗ್ರಾಪಂ ಅಧ್ಯಕ್ಷರ ಅಧಿಕಾರ ಕಡಿತ ವಿರೋಧಿಸಿ ಜಿಲ್ಲಾ, ತಾಲೂಕು ಮಟ್ಟದಲ್ಲಿ ಹೋರಾಟ: ಸುಭಾಷ್ ಶೆಟ್ಟಿ

Prasthutha|

ಮಂಗಳೂರು: ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರ ಕಲ್ಪನೆಯಂತೆ  ಮೂರು ಹಂತಗಳಲ್ಲಿ ಪಂಚಾಯತ್ ಗಳಿಗೆ ಹಂಚಲಾಗಿದೆ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ 23 ಅಧಿಕಾರಗಳನ್ನು ಗ್ರಾಮ ಪಂಚಾಯತಿಗೆ ನೀಡಲಾಗಿತ್ತು. ಈಗ ಪಂಚಾಯತ್ ಅಧ್ಯಕ್ಷರಿಗೆ ಚೆಕ್ಗೆ ಸಹಿ ಮಾಡದಂತೆ ಬಿಜೆಪಿ ಸರಕಾರ ಮಾಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸಮಿತಿ ಅಧ್ಯಕ್ಷ ಸುಭಾಷ್ ಶೆಟ್ಟಿ ಕೊಲ್ನಾಡ್ ಹೇಳಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಾಯತಿ ಅನುದಾನ 10% ಹೆಚ್ಚು ಮಾಡಲು ಅವಕಾಶ ಇದೆ. ಆದರೆ ಮೋದಿಯವರ ಸರಕಾರವು 20% ಕಡಿಮೆ ಮಾಡಿದೆ. ಹಿಂದೆ ಕೋಟ ಶ್ರೀನಿವಾಸ ಪೂಜಾರಿಯವರು ಪಂಚಾಯತ್ ರಾಜ್ ವ್ಯವಸ್ಥೆ ಪರ ವಾದಿಸಿದವರು. ಆದರೆ ಈಗ ರಾಜ್ಯ ಬಿಜೆಪಿ ಸರಕಾರವು ಪಂಚಾಯತ್ ಅಧಿಕಾರಕ್ಕೆ ಕತ್ತರಿ ಹಾಕಿದರೂ ಅವರು ಮಾತನಾಡುತ್ತಿಲ್ಲ ಎಂದು ಸುಭಾಷ್ ಟೀಕಿಸಿದರು.

ಸೋಲಾರ್ ಐದು ಲಕ್ಷದವರೆಗೆ ಟೆಂಡರ್ ಕರೆಯಲು ಪಂಚಾಯತಿಗೆ ಅಧಿಕಾರ ಇತ್ತು. ಈಗ ರಾಜ್ಯ ಸರಕಾರ ತೋರಿಸುವ ಟೆಂಡರುದಾರ, ಬಿಲ್ಲು ಪಾವತಿ ಮಾತ್ರ ಪಂಚಾಯತಿ ಕೈಯಲ್ಲಿದೆ. ಇದು 40% ವ್ಯವಹಾರ. ಗಾಂಧಿ ಪುರಸ್ಕಾರ ಹಣ ನೀಡದೆ ಬಿಜೆಪಿ ತಾರತಮ್ಮ ಮಾಡುತ್ತಿದೆ. ಪಂಚಾಯತ್ ಸಿಬ್ಬಂದಿ ನೇಮಕ ನಿಲ್ಲಿಸಿ ಜಿಲ್ಲಾ ಪಂಚಾಯತ್ ಗೆ ವಹಿಸಲಾಗಿದೆ. ಪಂಚಾಯತ್ ಮಟ್ಟದ ವಸತಿ ಯೋಜನೆ ನಿಂತಿದೆ. ಕ್ರಿಯಾ ಯೋಜನೆಯನ್ನು ಎರಡು ವರ್ಷಗಳಿಂದ ಅಧಿಕಾರಿಗಳೇ ಮಾಡುತ್ತಿದ್ದಾರೆ. ಇನ್ನು ಪಂಚಾಯತ್ ಸದಸ್ಯ, ಅಧ್ಯಕ್ಷರ ಏನಾದರೂ ವಜಾ ಇದ್ದರೆ ಚುನಾವಣಾ ಆಯೋಗ ಮಾಡಬೇಕು. ಆದರೆ ಅದನ್ನೂ ಬಿಜೆಪಿ ಅಧಿಕಾರಿಗಳಿಗೆ ಒಪ್ಪಿಸಿದೆ. ನಾವು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಇದನ್ನು ಪ್ರತಿಭಟಿಸುವ ನಿರ್ಧಾರ ಮಾಡಿರುವುದಾಗಿ ಸುಭಾಷ್ ಶೆಟ್ಟಿ ಹೇಳಿದರು.

- Advertisement -

  ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ. ಎಸ್. ಮುಹಮ್ಮದ್ ಮಾತನಾಡಿ, ಕಾರಣವಿಲ್ಲದೆ ಬಿಜೆಪಿ ಎರಡು ವರ್ಷಗಳಿಂದ ಜಿಪಂ, ತಾಪಂ ಚುನಾವಣೆ ಮುಂದೂಡಿದೆ. ತಳ ಮಟ್ಟದಲ್ಲಿ ಜನರ ಅಭಿವೃದ್ಧಿ ಬೇಕಿಲ್ಲವಾದ್ದರಿಂದ ಬಿಜೆಪಿ ಚುನಾವಣೆ ಮುಂದೂಡಿ ಅಧಿಕಾರಿಗಳ ಜೊತೆಗೆ ವ್ಯವಹಾರ ನಡೆಸುತ್ತಲಿದೆ. ಈಗಂತೂ ಪಂಚಾಯತ್ ಅಧಿಕಾರಕ್ಕೆ ಬಿಜೆಪಿ ಕತ್ತರಿ ಹಾಕಿದೆ. ನಾವು ಇನ್ನು ಇದನ್ನು ನ್ಯಾಯಾಲಯಕ್ಕೆ ಒಯ್ಯುವ ಸ್ಥಿತಿ ಇದೆ. ಅನುಮಾನಗಳನ್ನು ಕೆಆರ್ ಡಿಗೆ ತಿರುಗಿಸಲಾಗಿದೆ. ಅದರಲ್ಲಿ ಟೆಂಡರ್ ಇಲ್ಲದಿರುವುದರಿಂದ ಹಣ ಹೊಡೆಯಲು ಅನುಕೂಲ. ಭ್ರಷ್ಟಾಚಾರದ ತನಿಖೆ ಮಾಡುತ್ತಿಲ್ಲ. ಅಧಿಕಾರಿಗಳೇ ಎಲ್ಲ ನಡೆಸುವುದಾದರೆ ಈ ಬಿಜೆಪಿ ಮಂತ್ರಿ ಮಂಡಲ ಏಕಿರಬೇಕು? ಪ್ರಬಲ ಹೋರಾಟ ಅನಿವಾರ್ಯ ಎಂದು ತಿಳಿಸಿದರು.

  ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಗಳಲ್ಲಿ ಶಾಸಕ ಯು. ಟಿ. ಖಾದರ್ ನೇತೃತ್ವದಲ್ಲಿ ಮುಂದಿನ ಮಂಗಳವಾರ ಪಂಚಾಯತ್ ರಾಜ್ ನ್ಯಾಯ ಕೋರಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸದಾಶಿವ ಉಳ್ಳಾಲ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬೃಂದಾ ಪೂಜಾರಿ, ನೀರಜ್ ಪಾಲ್, ಸದಾಶಿವ ಉಳ್ಳಾಲ, ಅಚ್ಯುತ ಗಟ್ಟಿ, ಹೈದರ್ ಕೈರಂಗಳ, ಜೋಕಿಂ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.

Join Whatsapp