ಫಿಫಾ ವಿಶ್ವಕಪ್‌ | ಗ್ರೂಪ್‌ ಹಂತದ ಪಂದ್ಯಗಳಿಗೆ ಇಂದು ತೆರೆ; ಅಂತಿಮ  ಎರಡು ಸ್ಥಾನಗಳಿಗೆ 6 ತಂಡಗಳ ಪೈಪೋಟಿ

Prasthutha|

ಕತಾರ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್‌ ಟೂರ್ನಿಯ ಗ್ರೂಪ್‌ ಹಂತದ ಹೋರಾಟಗಳಿಗೆ ಶುಕ್ರವಾರ ತೆರೆಬೀಳಲಿದೆ. 32 ತಂಡಗಳ ಪೈಕಿ 16ರ ಘಟ್ಟಕ್ಕೆ ಈಗಾಗಲೇ 14 ತಂಡಗಳು ಪ್ರವೇಶ ಪಡೆದಿವೆ. ಶುಕ್ರವಾರ ರಾತ್ರಿ ನಡೆಯುವ 4 ಪಂದ್ಯಗಳ ಬಳಿಕ ಉಳಿದ 2 ಸ್ಥಾನಗಳ ವಿಜೇತರ ನಿರ್ಧಾರವಾಗಲಿದೆ. ವಿಶೇಷವೆಂದರೆ 2 ಸ್ಥಾನಗಳಿಗಾಗಿ 6 ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

- Advertisement -

ಗುಂಪು ಹಂತದ ಅಂತಿಮ ದಿನದ ಹಣಾಹಣಿಯಲ್ಲಿ ಗ್ರೂಪ್‌ G ಮತ್ತು Hನಲ್ಲಿರುವ 8 ತಂಡಗಳು ಮೈದಾನಕ್ಕಿಳಿಯಲಿವೆ. ಇವರಲ್ಲಿ ಗ್ರೂಪ್‌ G ಯಿಂದ ಬ್ರೆಜಿಲ್‌ ಮತ್ತು ಮತ್ತು Hನಿಂದ ಪೋರ್ಚುಗಲ್‌ ಈಗಾಗಲೇ ನಾಕೌಟ್‌ ಹಂತ ಪ್ರವೇಶಿಸಿದೆ. ಉಳಿದಂತೆ ಉರುಗ್ವೆ, ಘಾನ, ದಕ್ಷಿಣ ಕೊರಿಯಾ, ಹಾಗೂ ಸರ್ಬಿಯಾ, ಸ್ವಿಝರ್‌ಲ್ಯಾಂಡ್‌, ಕ್ಯಾಮರೂನ್‌ ತಂಡಗಳಿಗೆ ನಾಕೌಟ್‌ ಹಂತದ ಅವಕಾಶ ಮುಕ್ತವಾಗಿದೆ.

ಗುಂಪು Hನ ಲೆಕ್ಕಾಚಾರ

- Advertisement -

ಕ್ರಿಸ್ಟಿಯಾನೊ ರೊನಾಲ್ಡೊ ಸಾರಥ್ಯದ ಪೋರ್ಚುಗಲ್ ಈಗಾಗಲೇ ನಾಕೌಟ್‌ ಹಂತ ಪ್ರವೇಶಿಸಿದೆ.  H ಗುಂಪಿನಿಂದ ಇನ್ನೊಂದು ಸ್ಥಾನಕ್ಕಾಗಿ ಮೂರು ತಂಡಗಳು ಸ್ಪರ್ಧೆಯಲ್ಲಿವೆ.

ಘಾನಾ: ಉರುಗ್ವೆ ವಿರುದ್ಧದ ಕೊನೆಯ ಪಂದ್ಯದಲ್ಲಿ ಘಾನಾಗೆ ಗೆಲುವಿನ ಅಗತ್ಯವಿದೆ. ತಮ್ಮ ಗೆಲುವಿನ ಜೊತೆಗೆ ಪೋರ್ಚುಗಲ್‌ ವಿರುದ್ಧ ದಕ್ಷಿಣ ಕೊರಿಯಾ ಸೋಲುವುದನ್ನು ಘಾನಾ ಅಭಿಮಾನಿಗಳು ಕಾಯುತ್ತಿದ್ದಾರೆ.

ದಕ್ಷಿಣ ಕೊರಿಯಾ: ಅಂಕ ಪಟ್ಟಿಯಲ್ಲಿ ದಕ್ಷಿಣ ಕೊರಿಯಾ ಅಂತಿಮ ಸ್ಥಾನದಲ್ಲಿದೆ. ಪೋರ್ಚುಗಲ್ ವಿರುದ್ಧದ ಗೆಲುವಿನ ಹೊರತಾದ ಯಾವುದೇ ಫಲಿತಾಂಶವೂ ಕೊರಿಯ ಕೈ ಹಿಡಿಯಲಾರದು.

ಉರುಗ್ವೆ: ಆಡಿರುವ  2 ಪಂದ್ಯಗಳಲ್ಲಿ ಗೋಲಿನ ಖಾತೆ ತೆರೆಯಲು ವಿಫಲವಾಗಿರುವ ಉರುಗ್ವೆ, ತಲಾ 1 ಸೋಲು ಮತ್ತು ಡ್ರಾದ ಮೂಲಕ  ಕೇವಲ 1 ಅಂಕ ಹೊಂದಿದೆ. ಅದಾಗಿಯೂ ಕೊನೆಯ ಪಂದ್ಯದಲ್ಲಿ ಘಾನಾ ವಿರುದ್ಧ ಗೆದ್ದರೆ ನಾಕೌಟ್‌ ಸಾಧ್ಯತೆಯಿದೆ.

ಗುಂಪು G ಲೆಕ್ಕಾಚಾರ

2 ಪಂದ್ಯಗಳಲ್ಲಿ ಗೆಲುವಿನ ಮೂಲಕ 6 ಅಂಕಗಳೊಂದಿಗೆ ಬ್ರೆಜಿಲ್‌ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಉಳಿದಂತೆ ಸ್ವಿಝರ್‌ಲ್ಯಾಂಡ್‌ 3 ಮತ್ತು ಸರ್ಬಿಯಾ, ಕ್ಯಾಮರೂನ್‌ ತಂಡಗಳು ತಲಾ 1 ಅಂಕವನ್ನು ಹೊಂದಿದೆ.

ಶುಕ್ರವಾರದ ವೇಳಾಪಟ್ಟಿ

ಗುಂಪು H: ಘಾನಾ vs ಉರುಗ್ವೆ | ರಾತ್ರಿ 8:30 | ಅಲ್‌ ಜನೌಬ್‌ ಸ್ಟೇಡಿಯಂ

ಗುಂಪು H: ದಕ್ಷಿಣ ಕೊರಿಯಾ vs ಪೋರ್ಚುಗಲ್ | ರಾತ್ರಿ 8:30 | ಎಜುಕೇಶನ್‌ ಸಿಟಿ ಸ್ಟೇಡಿಯಂ

ಗುಂಪು G: ಸೆರ್ಬಿಯಾ vs ಸ್ವಿಝರ್‌ಲ್ಯಾಂಡ್‌ | ತಡರಾತ್ರಿ 12:30 | ಲುಸೈಲ್‌ ಸ್ಟೇಡಿಯಂ

ಗುಂಪು G: ಕ್ಯಾಮರೂನ್ vs ಬ್ರೆಜಿಲ್ | ತಡರಾತ್ರಿ 12:30 AM | ಸ್ಟೇಡಿಯಂ 974



Join Whatsapp