ವೀಕ್ಷಕ ವಿವರಣೆ ನೀಡುತ್ತಿರುವ ವೇಳೆ ಅಸ್ವಸ್ಥ; ರಿಕಿ ಪಾಂಟಿಂಗ್‌ ಆಸ್ಪತ್ರೆಗೆ ದಾಖಲು

Prasthutha|

ದಿಗ್ಗಜ ಕ್ರಿಕೆಟಿಗ, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಅವರಿಗೆ ವೀಕ್ಷಕ ವಿವರಣೆ ನೀಡುತ್ತಿದ್ದ ವೇಳೆ ಹೃದಾಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಟ್ರೇಲಿಯಾದ ಹಲವು ಮಾಧ್ಯಮಗಳು ವರದಿ ಮಾಡಿದೆ.

- Advertisement -

ಆಸ್ಟ್ರೇಲಿಯಾ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳ ನಡುವಿನ ಮೊದಲ ಟೆಸ್ಟ್‌ ಪಂದ್ಯ ಪರ್ತ್‌ ಮೈದಾನದಲ್ಲಿ ನಡೆಯುತ್ತಿದ್ದು, ಈ ಪಂದ್ಯದ ಮೂರನೇ ದಿನ, ಪಾಂಟಿಂಗ್‌ ವೀಕ್ಷಕ ವಿವರಣೆಗಾರರಾಗಿದ್ದರು.  ಈ  ವೇಳೆ ಪಾಂಟಿಂಗ್‌ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದೆ. ಊಟದ ವಿರಾಮದ ಅವಧಿಯಲ್ಲಿ ಪಾಂಟಿಂಗ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಫಾಕ್ಸ್‌ ಸ್ಪೋರ್ಟ್ಸ್‌ ವರದಿ ಮಾಡಿದೆ.  ವಿಂಡೀಸ್‌ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಂಟಿಂಗ್‌, ‘ಸೆವೆನ್‌ ನೆಟ್‌ವರ್ಕ್‌’ ವಾಹಿನಿಯ ವೀಕ್ಷಕ ವಿವರಣೆಗಾರರ ತಂಡದ ಭಾಗವಾಗಿದ್ದಾರೆ.

ʻರಿಕಿ ಪಾಂಟಿಂಗ್ ಅವರು ಅಸ್ವಸ್ಥರಾಗಿದ್ದಾರೆ ಮತ್ತು ಶುಕ್ರವಾರದ ಉಳಿದಿರುವ ಪಂದ್ಯದ ಅವಧಿಗೆ ವೀಕ್ಷಕ ವಿರಣೆ ನೀಡಲು ಲಭ್ಯರಿಲ್ಲʼ ಎಂದು  ‘ಸೆವೆನ್‌ ನೆಟ್‌ವರ್ಕ್‌’ ವಕ್ತಾರರು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆಸ್ಟ್ರೇಲಿಯಾದ ಹಲವು ಮಾಜಿ ಆಟಗಾರರು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ದಿಗ್ಗಜ ಕ್ರಿಕೆಟಿಗರಾದ ಶೇನ್‌ ವಾರ್ನ್‌ ಮತ್ತು ರಾಡ್‌ ಮಾರ್ಶ್‌ ಹೃದಾಯಾಘಾತದಿಂದ ನಿಧನರಾಗಿದ್ದರು.

- Advertisement -

47 ವರ್ಷದ ಪಾಂಟಿಂಗ್‌, 168 ಟೆಸ್ಟ್‌, 375 ಏಕದಿನ ಹಾಗೂ  17 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ.  1999, 2003 ಮತ್ತು 2007 ರಲ್ಲಿ ಸತತವಾಗಿ 3 ಬಾರಿ ಏಕದಿನ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯನ್ ತಂಡದ ಭಾಗವಾಗಿದ್ದರು.

Join Whatsapp