ಕ್ರೈಸ್ತರ ಚರ್ಚ್ ಗಳ ಮೇಲಿನ ದಾಳಿ ವಿರುದ್ಧ ತೀವ್ರ ಹೋರಾಟ: ಅಲ್ಫಾನ್ಸೋ ಫ್ರಾಂಕೋ

Prasthutha|

ಮಂಗಳೂರು : ರಾಜ್ಯಾದ್ಯಂತ ಕ್ರೈಸ್ತರ ಪ್ರಾರ್ಥನಾ ಮಂದಿರಗಳ ಮೇಲೆ ವ್ಯವಸ್ಥಿತವಾದ ದಾಳಿ ನಡೆಯುತ್ತಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಮತಾಂತರ ಎಂಬ ಸುಳ್ಳು ಆರೋಪದಲ್ಲಿ ನಡೆಯುತ್ತಿರುವ ದಾಳಿಯ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್ ಡಿಪಿಐ ತೀವ್ರ ಹೋರಾಟ ನಡೆಸಲಿದೆ ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೋ ಎಚ್ಚರಿಸಿದ್ದಾರೆ.

- Advertisement -


ಇಲ್ಲಿನ ಪ್ರೆಸ್ ಕ್ಲಬ್ ಭವನದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕ್ರೈಸ್ತರು ಸಾವಿರಾರು ವರ್ಷಗಳಿಂದ ಶಾಂತಿಯುತವಾಗಿ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಆದರೆ ದುಷ್ಟ ಶಕ್ತಿಗಳು ವ್ಯವಸ್ಥಿತವಾಗಿ ಕ್ರೈಸ್ತ ಧರ್ಮಗುರು, ಕ್ರೈಸ್ತ ಭಗಿನಿಯರ ಮೇಲೆ ಸುಳ್ಳು ಆರೋಪದಲ್ಲಿ ದಾಳಿ ನಡೆಸುತ್ತಿದೆ. ಕಡಿ, ಕೊಲ್ಲು ಸಿದ್ಧಾಂತವನ್ನು ಸಹಿಸಲು ಸಾಧ್ಯವಿಲ್ಲ. ದೇಶದ ಅನೇಕ ನಾಯಕರು ಕ್ರೈಸ್ತ ಸಂಸ್ಥೆಗಳಲ್ಲೇ ಕಲಿತು ಉನ್ನತ ಸ್ಥಾನಕ್ಕೆ ಏರಿದ್ದಾರೆ. ಇಂತಹ ಸಂಸ್ಥೆಗಳಲ್ಲಿ ಎಂದಿಗೂ ಮತಾಂತರ ನಡೆಯುತ್ತಿಲ್ಲ. ಅದರ ಅಗತ್ಯವೂ ನಮಗಿಲ್ಲ. ಇನ್ನು ಮುಂದೆ ಇಂತಹ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ತೀವ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.


ಎಸ್ ಡಿಪಿಐ ರಾಜ್ಯ ಉಪಾಧ್ಯಕ್ಷ, ಹೈಕೋರ್ಟ್ ಹಿರಿಯ ವಕೀಲ ಅಬ್ದುಲ್ ಮಜೀದ್ ಖಾನ್ ಮಾತನಾಡಿ, ರಾಜ್ಯದ ಚರ್ಚ್ ಗಳ ಬಗ್ಗೆ ಸಮೀಕ್ಷೆ ನಡೆಸಲು ಸರ್ಕಾರ ಆದೇಶ ನೀಡಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಯಾವುದೇ ಧರ್ಮವನ್ನು ಅನುಸರಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಧಾರ್ಮಿಕ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಇಂತಹ ಸಂದರ್ಭದಲ್ಲಿ ಒಂದು ಧರ್ಮದ ಸಂಸ್ಥೆಗಳನ್ನು ಗುರಿಯಾಗಿಸುವುದು ಖಂಡನೀಯ ಎಂದು ಹೇಳಿದರು.
ಈಗಾಗಲೇ ಸರ್ಕಾರದ ಈ ಆದೇಶದ ವಿರುದ್ಧ ಪಿಯುಸಿಎಲ್ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಅದಕ್ಕೆ ಪೂರಕವಾಗಿ ಉಚ್ಚ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಸರ್ಕಾರ ಜವಾಬ್ದಾರಿಯುತವಾಗಿ ವರ್ತಿಸಬೇಕು. ಧರ್ಮದ ಆಧಾರದಲ್ಲಿ ಯಾವುದೇ ಸಂಸ್ಥೆ, ವ್ಯಕ್ತಿಗಳನ್ನು ಗುರಿಯಾಗಿಸಬಾರದು ಎಂದು ಹೇಳಿದರು.

- Advertisement -


ಈ ದೇಶ ಮತ್ತು ರಾಜ್ಯಕ್ಕೆ ಕ್ರೈಸ್ತರ ಕೊಡುಗೆ ಅನನ್ಯ. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಕ್ರೈಸ್ತ ಸಮುದಾಯ ಸಾಕಷ್ಟು ಕೊಡುಗೆ ನೀಡಿದೆ. ಸಾವಿರಾರು ವರ್ಷಗಳಿಂದ ಕ್ರೈಸ್ತರು ಸಾಮರಸ್ಯದಿಂದ ದೇಶದಲ್ಲಿ ಬದುಕುತ್ತಿದ್ದಾರೆ. ಅವರನ್ನು ಗುರಿಯಾಗಿಸುವುದನ್ನು ಪಕ್ಷ ಸಹಿಸುವುದಿಲ್ಲ ಎಂದು ಅಬ್ದುಲ್ ಮಜೀದ್ ಹೇಳಿದರು.

ಎಸ್ ಡಿಪಿಐ ಮಾಧ್ಯಮ ಉಸ್ತುವಾರಿ ಅಕ್ರಂ ಹಸನ್ ಮಾತನಾಡಿ, ರಾಜ್ಯದಲ್ಲಿ ನಿರಂತರವಾಗಿ ಚರ್ಚ್, ಪ್ರಾರ್ಥನಾಲಯಗಳು ದಾಳಿಗೊಳಗಾಗುತ್ತಿವೆ. ತ್ರಿಪುರಾ, ಅಸ್ಸಾಂನಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದೆ. ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಿ ಈ ಮೂಲಕ ಸರ್ಕಾರದ ವೈಫಲ್ಯಗಳ ಬಗ್ಗೆ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ಕ್ರೈಸ್ತರು ಮತ್ತು ಚರ್ಚ್ ಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ನವೆಂಬರ್ 20ರಂದು ಬೆಂಗಳೂರಿನಲ್ಲಿ ಕ್ರೈಸ್ತ ಸಂಘಟನೆಗಳು ಹಮ್ಮಿಕೊಂಡಿರುವ ವಿಧಾನಸೌಧ ಚಲೋಗೆ ಎಸ್ ಡಿಪಿಐ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಅಕ್ರಂ ಹಸನ್ ತಿಳಿಸಿದರು.


ಪಕ್ಷದ ಜಿಲ್ಲಾ ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತಾಂತರ ಹೆಸರಿನಲ್ಲಿ ದಾಳಿ ನಡೆಯುವುದನ್ನು ಒಪ್ಪಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಈ ರೀತಿ ದಾಳಿ ನಡೆದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.


ಯಾರಿಗೆ ಬೇಕಾದರೆ ಯಾವುದೇ ಧರ್ಮ ಸ್ವೀಕರಿಸುವ, ಪ್ರಚಾರ ಮಾಡುವ, ಆಚರಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಇದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಆದರೆ ಪೊಲೀಸರು ದಾಳಿಕೋರರ ಪರವಾಗಿ ವರ್ತಿಸುತ್ತಿರುವುದು ಖಂಡನೀಯ. ಪೊಲೀಸರು ಕಾನೂನು ಪ್ರಕಾರ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಉಪಸ್ಥಿತರಿದ್ದರು.

Join Whatsapp