ಮಡಿಕೇರಿ: ಸ್ವತಂತ್ರ ಭಾರತದ ಮೊದಲ ಸೇನಾದಂಡ ನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮ ದಿನಾಚರಣೆ ಆಚರಿಸುವ ಸಂಬಂಧ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 123 ನೇ ಜನ್ಮ ದಿನಾಚರಣೆಯನ್ನು ಜನವರಿ 28ರಂದು ಆಚರಿಸುವ ಬಗ್ಗೆ ಚರ್ಚೆ ನಡೆಯಿತು.
ಕೋವಿಡ್-19 ಹಿನ್ನೆಲೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ‘ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿರುವ ಕಾರ್ಯಪ್ಪ ಅವರ ಪ್ರತಿಮೆಗೆ ಗೌರವ ನಮನ ಸಲ್ಲಿಸುವುದು, ಹಾಗೆಯೇ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಕುರಿತು ಆನ್ ಲೈನ್ ಮೂಲಕ ಪ್ರಬಂಧ ಸ್ಪರ್ಧೆ ಏರ್ಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸುವಂತಾಗಬೇಕು ಎಂದು ಫೋರಂ ಅಧ್ಯಕ್ಷ ಕರ್ನಲ್ (ನಿವೃತ್ತ) ಸುಬ್ಬಯ್ಯ ಸಲಹೆ ಮಾಡಿದರು. ಮೇಜರ್(ನಿವೃತ್ತ) ಬಿದ್ದಂಡ ನಂಜಪ್ಪ ಅವರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜನ್ಮ ದಿನಾಚರಣೆಗೆ ಸಂಬಂಧಿಸಿದಂತೆ ಹಲವು ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜಯಂತಿ ಆಚರಣೆ ಸಂಬಂಧ ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಜುಮೊಗವೀರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ವೇದಮೂರ್ತಿ, ನಗರಸಭೆಯ ಎಇಇ ರಾಜೇಂದ್ರ ಕುಮಾರ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಿಂದಿ ಉಪನ್ಯಾಸಕರಾದ ಖುರ್ಷಿದ್ ಬಾನು, ಸೈನಿಕ ಕಲ್ಯಾಣ ಇಲಾಖೆಯ ವಿಘ್ನೇಶ್ವರ್ ಇತರರು ಇದ್ದರು.