ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧದ ಹೋರಾಟ ಮುಂದುವರಿಸಲು “ದೇಶಪ್ರೇಮಿ ಸಂಘಟನೆಗಳ ಒಕ್ಕೂಟ” ನಿರ್ಧಾರ

Prasthutha|

ಕುಲಪತಿ ಯಡಪಡಿತ್ತಾಯರ ವಿರುದ್ಧ ಖಂಡನಾ ನಿರ್ಣಯ

- Advertisement -

ಮಂಗಳೂರು: ರೋಹಿತ್ ಚಕ್ರತೀರ್ಥಗೆ ನಾಗರಿಕ ಸನ್ಮಾನ ಕಾರ್ಯಕ್ರಮ ರದ್ದುಗೊಂಡ ಕಾರಣ ಮುತ್ತಿಗೆ ಪ್ರತಿಭಟನೆಯನ್ನು ಕೈ ಬಿಟ್ಟ ಮಂಗಳೂರಿನ ನಾಗರಿಕ ಸಂಘಟನೆಗಳು “ದೇಶಪ್ರೇಮಿ ಸಂಘಟನೆಗಳ ಒಕ್ಕೂಟ” ದ ನೇತೃತ್ವದಲ್ಲಿ ನಗರದ ವಿಕಾಸ ಕಚೇರಿಯಲ್ಲಿ ಅವಲೋಕನ ಸಭೆ ನಡೆಸಿದವು.


ನಾರಾಯಣ ಗುರು, ಕಯ್ಯಾರ ಕಿಂಞಣ್ಣ ರೈ, ಕುವೆಂಪು, ಅಂಬೇಡ್ಕರ್, ರಾಣಿ ಅಬ್ಬಕ್ಕರನ್ನು ಅವಮಾನಿಸಿದ ಪರಿಷ್ಕೃತ ಪಠ್ಯವನ್ನು ಸರಕಾರ ಕೈಬಿಡಲು ಆಗ್ರಹಿಸಿ ನಡೆಯುತ್ತಿರುವ ಹೋರಾಟವನ್ನು ದಕ್ಷಿಣ ಕ‌ನ್ನಡ ಜಿಲ್ಲೆಯಲ್ಲಿ ತೀವ್ರಗೊಳಿಸಲು ತೀರ್ಮಾನಿಸಲಾಯಿತು. ಪಠ್ಯ ಪುಸ್ತಕ ಪರಿಷ್ಕರಣೆಯ ಕುರಿತು ವಿಚಾರ ಸಂಕಿರಣ, ಜಾತ್ಯತೀತ ಪಕ್ಷ, ಸಂಘಟನೆಗಳ ವಿಶಾಲ ವೇದಿಕೆಯಡಿ ಬೃಹತ್ ಜಾಥಾ ನಡೆಸಲು ನಿರ್ಧರಿಸಲಾಯಿತು. ಹಾಗೆಯೆ ನಾಡಿನ ಮಹಾ ಚೇತನಗಳಿಗೆ ಅವಮಾನಿಸಿದ ಚಕ್ರತೀರ್ಥ ಸನ್ಮಾನ ಕಾರ್ಯಕ್ರಮದಲ್ಲಿ ನಾಗರಿಕರ ವಿನಂತಿಯ ಹೊರತಾಗಿಯು ಭಾಗವಹಿಸುವುದರ ಪರವಾಗಿಯೇ ನಿಂತ ವಿ ವಿ ಕುಲಪತಿ ಡಾ. ಬಿ ಎಸ್ ಯಡಪಡಿತ್ತಾಯರ ವಿರುದ್ಧ ಸಭೆ ಖಂಡನಾ ನಿರ್ಣಯ ಕೈಗೊಂಡಿತು. ಯಡಪಡಿತ್ತಾಯರ ನಡೆ ನಿರ್ಲಜ್ಜವಾದದ್ದು, ಮಂಗಳೂರು ವಿವಿಯ ಘನತೆಗೆ ಯಡಪಡಿತ್ತಾಯರ ನಡೆ ಕುತ್ತು ತಂದಿದೆ ಎಂದು ಸಭೆ ಆರೋಪಿಸಿತು.

- Advertisement -


ಸಭೆಯ ಅಧ್ಯಕ್ಷತೆಯನ್ನು ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ವಹಿಸಿದ್ದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ ಕುಕ್ಯಾನ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಕಾರ್ಪೊರೇಟರ್ ಅಬ್ದುಲ್ ಲತೀಫ್, ಎಐವೈಎಫ್ ರಾಜ್ಯಾಧ್ಯಕ್ಷ ಹರೀಶ್ ಬಾಲ, ವಿವಿಧ ಸಂಘಟನೆಗಳ ಮುಖಂಡರಾದ ಸುನಿಲ್ ಕುಮಾರ್ ಬಜಾಲ್, ಎಚ್ ವಿ ರಾವ್, ಸೀತಾರಾಮ ಬೇರಿಂಜ, ಪುಷ್ಟರಾಜ್ ಬೋಳೂರು, ರಮಾನಂದ ಪೂಜಾರಿ, ಬಿ ಕೆ ಇಮ್ತಿಯಾಜ್, ಮಹಾಬಲ ದೆಪ್ಪಲಿಮಾರ್, ಇಸ್ಮಾಯಿಲ್ ಫಯಾಜ್, ಭಾರತಿ ಬೋಳಾರ, ಯುವ ನ್ಯಾಯವಾದಿಗಳಾದ ನಿತಿನ್ ಕುತ್ತಾರ್, ಚರಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Join Whatsapp