ಸಿಂಘು ಗಡಿಯಲ್ಲಿ ರೈತರ ವಿರುದ್ಧ ಪ್ರತಿಭಟನೆ ಮಾಡಿದ್ದು ಸ್ಥಳೀಯರಲ್ಲ | ಬಲಪಂಥೀಯ ‘ಹಿಂದೂ ಸೇನಾ’ ಕಾರ್ಯಕರ್ತರ ಕೃತ್ಯ

Prasthutha|

ನವದೆಹಲಿ : ನೂತನ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಳೆದ ಎರಡು ತಿಂಗಳುಗಳಿಂದ ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಗಣರಾಜ್ಯೋತ್ಸವ ದಿನ ಹಿಂಸೆಗೆ ತಿರುಗಿತ್ತು.

- Advertisement -

ರೈತರ ಹೋರಾಟಕ್ಕೆ ಅಪಖ್ಯಾತಿ ತರುವ ಉದ್ದೇಶದಿಂದ ಬಿಜೆಪಿ ಕಾರ್ಯಕರ್ತನೊಬ್ಬನ ಕುಮ್ಮಕ್ಕಿನಿಂದ ಈ ಹಿಂಸಾಚಾರ ನಡೆದಿದೆ ಎಂದು ರೈತ ಮುಖಂಡರು ಆಪಾದಿಸಿದ್ದಾರೆ. ಈ ನಡುವೆ ಅಂದು ನಡೆದ ಹಿಂಸಾತ್ಮಕ ಘಟನೆಗಳನ್ನು ಇಂಚಿಂಚೂ ಬಿಡದೆ ರೈತರನ್ನು ದೇಶದ್ರೋಹಿಗಳು ಎಂಬಂತೆ ಬಿಂಬಿಸುವಲ್ಲಿ ಭಾರತದ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಶಕ್ತಿಮೀರಿ ಪ್ರಯತ್ನಿಸಿದ್ದವು.

ಅದರ ಮುಂದುವರಿದ ಭಾಗವಾಗಿ ನಿನ್ನೆ (ಗುರುವಾರ) ಬಹುತೇಕ ಮಾಧ್ಯಮಗಳು ಮತ್ತೊಂದು ಘೋರ ಸುಳ್ಳನ್ನು ಪ್ರಚಾರ ಮಾಡಿ, ರೈತರ ಹೋರಾಟದ ಪ್ರಭಾವ ಕುಗ್ಗಿಸಲು ಶತಪ್ರಯತ್ನ ಮಾಡಿದವು.

- Advertisement -

ಸಿಂಘು ಗಡಿಯಲ್ಲಿ ಪ್ರತಿಭಟನಾ ನಿರತರನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಮುಖ್ಯವಾಹಿನಿಯ ಬಹುತೇಕ ಮಾಧ್ಯಮಗಳು ವರದಿ ಮಾಡಿದವು.

ಆದರೆ, ನಿಜಕ್ಕೂ ಈ ಪ್ರತಿಭಟನೆ ಮುನ್ನಡೆಸಿದವರು ಯಾರೆಂದರೆ, ಬಲಪಂಥೀಯ ವಿಚಾರಧಾರೆಯ ‘ಹಿಂದೂ ಸೇನಾ’ ಕಾರ್ಯಕರ್ತರು ಎಂಬುದು ಸ್ಪಷ್ಟವಾಗಿದೆ.

“ದೆಹಲಿ : ಸಿಂಘು ಗಡಿಯಲ್ಲಿ ಸ್ಥಳೀಯರು ಮತ್ತು ಹಿಂದೂ ಸೇನಾ ಗುಂಪು ರೈತರನ್ನು ತೆರವುಗೊಳಿಸುವಂತೆ ಮೆರವಣಿಗೆ ಮಾಡಿದವು” ಎಂದು ‘ಆಜ್ ತಕ್’ ಟ್ವೀಟ್ ಮಾಡಿದೆ. ಈ ಟ್ವೀಟನ್ನು ಆ ಸಂಘಟನೆಯ ಅಧ್ಯಕ್ಷ ವಿಷ್ಣು ಗುಪ್ತ ರಿಟ್ವೀಟ್ ಮಾಡಿದ್ದಾರೆ.

ವಿಷ್ಣು ಗುಪ್ತ ಈ ಸಂಬಂಧ ಮಾಧ್ಯಮ ಹೇಳಿಕೆಯನ್ನೂ ನೀಡಿದ್ದಾರೆ. ಸ್ಥಳೀಯ ಹಿಂದೂ ಸೇನಾ ಕಾರ್ಯಕರ್ತರು ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಗೆ ತೆರಳಿ ಖಲಿಸ್ತಾನ್ ಬೆಂಬಲಿಗರ ವಿರುದ್ಧ ಘೋಷಣೆ ಕೂಗಿದರು ಮತ್ತು ರಸ್ತೆ ತೆರವುಗೊಳಿಸುವಂತೆ ರೈತರನ್ನು ಒತ್ತಾಯಿಸಿದರು ಎಂದು ವಿಷ್ಣು ಗುಪ್ತ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ‘ದ ವೈರ್’ ವರದಿ ಮಾಡಿದೆ.

ಸರಕಾರದೊಂದಿಗೆ ಮಾತನಾಡಿ 24 ಗಂಟೆಯೊಳಗೆ ಸಮಸ್ಯೆ ಇತ್ಯರ್ಥಗೊಳಿಸಿ ಮತ್ತು ಸಿಂಘು ಗಡಿ ಮತ್ತು ರಸ್ತೆ ಖಾಲಿ ಮಾಡಿ ಎಂದು ಖಲಿಸ್ತಾನ್ ಪರ ಪ್ರತಿಭಟನಕಾರರಿಗೆ ಹಿಂದೂ ಸೇನಾ ಎಚ್ಚರಿಕೆ ನೀಡಿದೆ ಎಂದೂ ಅವರು ತಿಳಿಸಿದ್ದಾರೆ.

ಹಿಂದೂ ಸೇನಾ ಈ ಹಿಂದೆಯೂ ಸಾಕಷ್ಟು ಬಾರಿ ಬಲವಂತವಾಗಿ ಹಿಂದೂ ಮೌಲ್ಯ ಮತ್ತು ಸಂಸ್ಕೃತಿ ಹೇರುವ ವಿಚಾರದಲ್ಲಿ ಸುದ್ದಿಯಾಗಿರುವ ಸಂಘಟನೆ. ಪ್ರೇಮಿಗಳ ದಿನಾಚರಣೆಯಂದು ಪ್ರೇಮಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಒತ್ತಡ ಹೇರಿದ್ದ ಸಂಘಟನೆಯಿದು. ಕಳೆದ ವರ್ಷದ ಸಿಎಎ/ಎನ್ ಆರ್ ಸಿ ಹೋರಾಟದ ವೇಳೆಯೂ ಈ ಸಂಘಟನೆ, ಶಹೀನ್ ಬಾಗ್ ಪ್ರತಿಭಟನಕಾರರ ಮೇಲೂ ಹಿಂಸೆಯ ಬೆದರಿಕೆಯೊಡ್ಡಿತ್ತು.

Join Whatsapp