ರೈತರ ಹೋರಾಟಕ್ಕೆ ಅಪಖ್ಯಾತಿ ಉಂಟು ಮಾಡಲು ಬಿಜೆಪಿಯಿಂದ ಹಿಂಸಾಚಾರಕ್ಕೆ ಕುಮ್ಮಕ್ಕು : ಶಿವಸೇನೆ ಆರೋಪ

Prasthutha|

ಮುಂಬೈ : ಕೇಂದ್ರದ ನೂತನ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಸುಮಾರು 60 ದಿನಗಳಿಂದ ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಪ್ರತಿಭಟನೆಗೆ ಅಪಖ್ಯಾತಿ ಉಂಟು ಮಾಡಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವೇ ಹಿಂಸೆಗೆ ಕುಮ್ಮಕ್ಕು ನೀಡಿತ್ತು ಎಂದು ಶಿವಸೇನೆ ಆಪಾದಿಸಿದೆ. ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ.

- Advertisement -

ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ನಡೆದಿರುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದು ಅದು ಅಭಿಪ್ರಾಯ ಪಟ್ಟಿದೆ.

ಕಳೆದ 60 ದಿನಗಳಿಂದ ಸಿಂಘು ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಜ.26ರಂದು ಟ್ರಾಕ್ಟರ್ ಪರೇಡ್ ಮಾಡುವುದಾಗಿ ರೈತ ಮುಖಂಡರು ಘೋಷಿಸಿದ್ದರು. ಆದರೆ, ಬ್ಯಾರಿಕೇಡ್ ಗಳನ್ನು ಮುರಿದು ದೆಹಲಿ ಗಡಿ ಪ್ರವೇಶಿಸಿದ ಟ್ರಾಕ್ಟರ್ ಸವಾರರು ನೇರವಾಗಿ ಕೆಂಪುಕೋಟೆಗೆ ಧಾವಿಸಿದ್ದಾರೆ. ಗಣರಾಜ್ಯೋತ್ಸವ ದಿನಾಚರಣೆಯ ಪಥಸಂಚಲನ ಬೆಳಗ್ಗೆ ರಾಜಪಥ್ ನಲ್ಲಿ ನಡೆದಿದೆ. ಆದರೆ, ಮಧ್ಯಾಹ್ನದ ವೇಳೆ ದೆಹಲಿಯಲ್ಲಿ ಹಠಾತ್ ಭಯಭೀತ ವಾತಾವರಣ ಸೃಷ್ಟಿಯಾಗಿದೆ. ಗಣರಾಜ್ಯೋತ್ಸವ ದಿನದಂದು ಇಂತಹ ಘಟನೆ ನಡೆದಿರುವುದು ಪ್ರತಿಯೊಬ್ಬರಿಗೂ ನೋವನ್ನುಂಟು ಮಾಡಿದೆ.

- Advertisement -

ರೈತರ ಹೋರಾಟ ಭಯೋತ್ಪಾದಕರ ಕೈವಶವಾಗಿದೆ ಎಂದು ಬಿಜೆಪಿ ಪ್ರತಿಪಾದಿಸಿದೆ. ಆದರೆ, ಕೆಂಪುಕೋಟೆಯಲ್ಲಿ ದಾಂಧಲೆ ನಡೆಸಿದ ಗುಂಪಿನ ನೇತೃತ್ವವನ್ನು ದೀಪು ಸಿದು ಎಂಬಾತ ವಹಿಸಿದ್ದ. ಸಿಧು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಕ್ಯಾಂಪ್ ಗೆ ಸೇರಿದವನೆಂಬುದು ಈಗ ಬಹಿರಂಗವಾಗಿದೆ. ಪಂಜಾಬ್ ನ ಬಿಜೆಪಿ ಸಂಸದ ಸನ್ನಿ ಡಿಯೊಲ್ ಜೊತೆ ಸಿಧುಗೆ ಆಪ್ತ ಸಂಬಂಧವಿದೆ. ಕಳೆದ ಕೆಲವು ದಿನಗಳಿಂದ ಸಿಧು ರೈತರ ನಡುವೆ ಪ್ರವೇಶಿಸಿ, ಪ್ರತ್ಯೇಕತವಾದ ಮತ್ತು ದಂಗೆಯ ಮಾತುಗಳನ್ನಾಡುತ್ತಿದ್ದ ಎಂದು ರೈತ ನಾಯಕರಾದ ರಾಕೇಶ್ ಟಿಕಾಯತ್ ರಂತವರು ಹೇಳಿದ್ದಾರೆ ಎಂದು ಶಿವಸೇನೆ ತಿಳಿಸಿದೆ.



Join Whatsapp