ರೈತರ ಹೋರಾಟದ ವೇಳೆ ನಡೆದ ಹಿಂಸಾಚಾರದ ಹಿಂದೆ ಬಿಜೆಪಿಯಿದೆ : NCP

Prasthutha|

ಮುಂಬೈ : ರೈತರ ಹೋರಾಟದ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ದಿನ ದೆಹಲಿಯಲ್ಲಿ ನಡೆದ ಹಿಂಸಾಚಾರದ ಹಿಂದೆ ಬಿಜೆಪಿಯಿದೆ ಎಂದು ಎನ್ ಸಿಪಿ ಕೂಡ ಆಪಾದಿಸಿದೆ. ಎನ್ ಸಿಪಿ ವಕ್ತಾರ, ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಈ ಗಂಭೀರ ಆರೋಪ ಮಾಡಿದ್ದಾರೆ.

- Advertisement -

ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬ ಆರೋಪ ಹೊತ್ತಿರುವ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿರುವ ದೀಪ್ ಸಿದು ಬಗ್ಗೆ ಬಿಜೆಪಿ ಯಾಕೆ ಮೌನವಾಗಿದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿ ದಾಂಧಲೆ ನಡೆಸಿದ ಗುಂಪನ್ನು ನಟ ದೀಪ್ ಸಿದು ಮುನ್ನಡೆಸಿದ್ದ ಎಂಬ ಆರೋಪ ಕೇಳಿಬಂದಿದೆ. ಈ ದೀಪ್ ಸಿದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ. ದೀಪ್ ಸಿದು ಬಿಜೆಪಿ ಸಂಸದ ಸನ್ನಿ ಡಿಯೊಲ್ ಆಪ್ತನಾಗಿದ್ದು, ಅವರ ಚುನಾವಣಾ ಮ್ಯಾನೇಜರ್ ಆಗಿ ಚುನಾವಣಾ ಪ್ರಚಾರವನ್ನೂ ಮಾಡಿದ್ದನೆನ್ನಲಾಗಿದೆ.

- Advertisement -

ಕೆಲವು ದಿನಗಳ ಹಿಂದೆಯಷ್ಟೇ ಸಿದು ರೈತರ ಪ್ರತಿಭಟನೆಯ ನಡುವೆ ಸೇರಿಕೊಂಡಿದ್ದ. ಈತನ ಹೇಳಿಕೆ, ವರ್ತನೆಗಳ ಬಗ್ಗೆ ಅನುಮಾನಗೊಂಡು ರೈತ ಮುಖಂಡರು ಈತನನ್ನು ಪ್ರತಿಭಟನೆಯಿಂದ ಹೊರಗಿಟ್ಟಿದ್ದರು. ರೈತರು ಟ್ರಾಕ್ಟರ್ ರ್ಯಾಲಿ ನಿಗದಿತ ಪ್ರದೇಶದಲ್ಲೇ ಶಾಂತಿಯುತವಾಗಿ ಮಾಡುತ್ತಿದ್ದರೆ, ಒಂದೆಡೆಯಿಂದ ಬಲವಂತವಾಗಿ ದೆಹಲಿ ಪ್ರವೇಶಿಸಿದ ಗುಂಪೊಂದು ನೇರವಾಗಿ ಕೆಂಪುಕೋಟೆ ಧಾವಿಸಿತ್ತು.

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೆಂಪುಕೋಟೆ ಬಳಿ ಬಿಗಿ ಭದ್ರತೆಯಿತ್ತು. ಆದರೆ, ಗುಂಪು ಕೆಂಪುಕೋಟೆ ಹತ್ತಿ ದಾಂಧಲೆ ನಡೆಸಿ, ಅಲ್ಲಿದ್ದ ಪ್ರತ್ಯೇಕ ಧ್ವಜಸ್ತಂಭದ ಮೇಲೆ ಸಿಖ್ ಧ್ವಜ ಹಾರಿಸಿತ್ತು. ಸಿದುವೇ ಮೊದಲ ಬಾರಿ ಧ್ವಜಸ್ತಂಭ ಹತ್ತಿ ಧ್ವಜ ಹಾರಿಸಿದನೆಂದೂ ಹೇಳಲಾಗುತ್ತಿದೆ. ವೈರಲ್ ಆಗಿರುವ ವೀಡಿಯೊವೊಂದರಲ್ಲಿ ಸಿದು ಘೋಷಣೆಗಳನ್ನು ಕೂಗುತ್ತಿರುವುದು ಕೇಳಿದೆ. ಆದರೆ, ಇದೇ ವೇಳೆ ರೈತರು ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತಿದ್ದಾಗ ಸಿದು ಮೌನವಾಗಿರುವ ವೀಡಿಯೊಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.   

Join Whatsapp