ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರ ನೂತನ ಕೃಷಿ ನೀತಿಯನ್ನು ವಿರೋಧಿಸಿ ಕಳೆದ ಒಂದು ತಿಂಗಳಿನಿಂದ ಕೊರೆವ ಚಳಿಯನ್ನೂ ಲೆಕ್ಕಿಸದೆ ಸತತ ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರ ಆಕ್ರೋಶ ತೀವ್ರಗೊಳ್ಳುತ್ತಿದ್ದು, ಪಂಜಾಬ್ ನಲ್ಲಿ 1,500ಕ್ಕೂ ಹೆಚ್ಚು ರಿಲಯನ್ಸ್ ಸಮೂಹದ ಜಿಯೊ ಮೊಬೈಲ್ ಟವರ್ ಗಳಿಗೆ ಹಾನಿ ಎಸಗಲಾಗಿದೆ ಎಂದು ವರದಿಗಳು ತಿಳಿಸಿವೆ. ಹೀಗಾಗಿ ರಾಜ್ಯದ ಹಲವೆಡೆ ಸಂಪರ್ಕ ಸೇವೆಗೆ ತೊಡಕಾಗಿದೆ.
ಉದ್ಯಮಿಗಳಾದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿಗೆ ಸೇರಿದ ಸಂಸ್ಥೆಗಳ ಮೂಲಸೌಕರ್ಯಗಳಿಗೆ ಅಡ್ಡಿಪಡಿಸುವ ಮೂಲಕ ರೈತರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತಿದ್ದಾರೆ. 1,500ಕ್ಕೂ ಅಧಿಕ ಮೊಬೈಲ್ ಟವರ್ ಗಳ ವಿದ್ಯುತ್ ಸಂಪಕ್ಷ ಕಡಿತಗೊಳಿಸಲಾಗಿದೆ.
ಮೋದಿ ಸರಕಾರದ ಕಾನೂನು ಮುಕೇಶ್ ಅಂಬಾನಿ, ಗೌತಮ್ ಅದಾನಿಯಂತಹ ಕಾರ್ಪೊರೇಟ್ ಉದ್ಯಮಿಗಳಿಗೆ ನೆರವಾಗಲಿದೆ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಈ ಕಂಪೆನಿಗಳ ಉತ್ಪನ್ನಗಳಿಗೆ ರೈತರು ಬಹಿಷ್ಕಾರ ಹಾಕಿದ್ದಾರೆ. ಇದರ ಭಾಗವಾಗಿ ದೇಶಾದ್ಯಂತ ಲಕ್ಷಾಂತರ ಜನರು ಜಿಯೊ ಸಿಮ್ ಬದಲಾಯಿಸಿ, ಬೇರೆ ಕಂಪೆನಿಗಳ ಸಿಮ್ ಗಳಿಗೆ ಪೋರ್ಟ್ ಆಗಿದ್ದಾರೆ.