ನವದೆಹಲಿ : ಕೆಂಪುಕೋಟೆಯಲ್ಲಿ ದಾಂಧಲೆ ಆರಂಭಿಸಿರುವ ರೈತರು ಗಲಭೆ ಇನ್ನಷ್ಟು ತೀವ್ರಗೊಳಿಸಿದ್ದಾರೆ. ಸಂಜೆಯಾಗುತ್ತಿದ್ದರೂ ಕೆಂಪುಕೋಟೆ ಬಳಿಯಲ್ಲೇ ನೂರಾರು ರೈತರು ಠಿಕಾಣಿ ಹೂಡಿದ್ದಾರೆ. ಇನ್ನೂ ಸಾಕಷ್ಟು ಸಂಖ್ಯೆಯ ರೈತರು ಕೆಂಪುಕೋಟೆಯತ್ತ ಧಾವಿಸುತ್ತಿದ್ದಾರೆ.
ಸಂಜೆಯಾಗುತ್ತಿದ್ದರೂ, ರೈತರು ಹಿಮ್ಮೆಟ್ಟುವ ಲಕ್ಷಣ ಗೋಚರಿಸುತ್ತಿಲ್ಲ. ಹೋರಾಟ ಇನ್ನಷ್ಟು ತೀವ್ರಗೊಳ್ಳುತ್ತಿದೆ. ದೆಹಲಿಯ ಐಟಿಒ ಸರ್ಕಲ್ ಬಳಿ ಪ್ರತಿಭಟನೆಕಾರರು ಇನ್ನಷ್ಟು ಹೆಚ್ಚೆಚ್ಚು ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಪೊಲೀಸರಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.
ಕೆಲವು ರೈತ ಮುಖಂಡರು ಪ್ರತಿಭಟನಕಾರರನ್ನು ಶಾಂತಿ ಕಾಪಾಡಲು ಮನವಿ ಮಾಡುತ್ತಿದ್ದಾರೆ. ಆದರೆ, ಉದ್ರಿಕ್ತ ಯುವಕರು ಘೋಷಣೆಗಳನ್ನು ಕೂಗುತ್ತಿದ್ದಾರೆ. ಹಲವೆಡೆ ಪ್ರತಿಭಟನೆಗಳು ಮತ್ತೆ ಹಿಂಸಾಚಾರಕ್ಕೆ ತಿರುಗುವ ಎಲ್ಲಾ ಲಕ್ಷಣವಿದೆ.
ಈ ನಡುವೆ ಗೃಹ ಸಚಿವ ಅಮಿತ್ ಶಾ ತುರ್ತು ಸಭೆ ನಡೆಸುತ್ತಿದ್ದು, ಪರಿಸ್ಥಿತಿಯ ಮಾಹಿತಿ ಪಡೆಯುತ್ತಿದ್ದಾರೆ. ಸಭೆ ಬಳಿಕ ಭದ್ರತಾ ಸಿಬ್ಬಂದಿಗೆ ಏನು ಸೂಚನೆ ನೀಡಲಿದ್ದಾರೆ ಎಂಬುದು ಈಗ ಭಾರಿ ಚರ್ಚೆಗೆ ಗುರಿಯಾಗಿದೆ.