ನವದೆಹಲಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಇಂದು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಡೆಸಲುದ್ದೇಶಿಸಿರುವ ‘ಟ್ರಾಕ್ಟರ್ ಕ್ರಾಂತಿ’ಗೆ ಭಾರೀ ಸಿದ್ಧತೆ ನಡೆದಿದೆ. ಈ ನಡುವೆ ಗುಂಪೊಂದು ಟ್ರಾಕ್ಟರ್ ಗಳ ಮೂಲಕ ಗಡಿ ದಾಟಿ ದೆಹಲಿಯೊಳಗೆ ಪ್ರವೇಶಿಸಿದೆ ಎಂದು ವರದಿಗಳು ತಿಳಿಸಿವೆ.
ರೈತರ ಟ್ರ್ಯಾಕ್ಟರ್ ಗಳ ಮೇಲೆ ರಾಷ್ಟ್ರಧ್ವಜ ಹಾಗೂ ರೈತ ಸಂಘಟನೆಗಳ ಧ್ವಜಗಳು ಕಂಡು ಬರುತ್ತಿದ್ದು, ಸಿಂಘು ಗಡಿ ಮೂಲಕ ದೆಹಲಿ ಪ್ರವೇಶಿಸಿರುವ ರೈತರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ದೆಹಲಿ ತಲುಪಿರುವ ರೈತರ ಟ್ರ್ಯಾಕ್ಟರ್ ರ್ಯಾಲಿ ಇದೀಗ ಕಾಂಜವಾಲಾ ಚೌಕ್-ಔಚಾಂಡಿ ಗಡಿ-ಕೆಎಂಪಿ-ಜಿಟಿ ರಸ್ತೆ ಜಂಕ್ಷನ್ ಕಡೆಗೆ ಸಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ರೈತರ ಬೃಹತ್ ಟ್ರ್ಯಾಕ್ಟರ್ ರ್ಯಾಲಿಗೆ ಷರತ್ತು ಬದ್ಧ ಅನುಮತಿ ನೀಡಿರುವ ದೆಹಲಿ ಪೊಲೀಸರು ಮೂರು ಮಾರ್ಗಗಳನ್ನು ನಿಗದಿಪಡಿಸಿದ್ದಾರೆ. ವಿವಿಧ ರಾಜ್ಯಗಳ 2 ಲಕ್ಷಕ್ಕೂ ಅಧಿಕ ಟ್ರ್ಯಾಕ್ಟರ್ ಗಳು ಈ ರ್ಯಾಲಿಯಲ್ಲಿ ಭಾಗಿಯಾಗುತ್ತಿವೆ.