ಗಣರಾಜ್ಯೋತ್ಸವ ದಿನದ ರೈತರ ‘ಟ್ರ್ಯಾಕ್ಟರ್ ಪರೇಡ್’ಗೆ ಪಾಪ್ಯುಲರ್ ಫ್ರಂಟ್ ಬೆಂಬಲ

Prasthutha|

ಬೆಂಗಳೂರು : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾನೂನನ್ನು ವಿರೋಧಿಸಿ ಜ.26ರಂದು ರಾಜಧಾನಿ ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ರೈತರ ‘ಟ್ರ್ಯಾಕ್ಟರ್ ಪರೇಡ್’ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಸಂಪೂರ್ಣ ಬೆಂಬಲವನ್ನು ಘೋಷಿಸಿದೆ.

- Advertisement -

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸುಮಾರು 2 ತಿಂಗಳುಗಳಿಂದ ದೆಹಲಿ ಗಡಿ ಭಾಗಗಳಲ್ಲಿ ರೈತ ಸಮುದಾಯವು ತೀವ್ರ ಚಳಿಯನ್ನೂ ಲೆಕ್ಕಿಸದೇ ನಿರಂತರ ಪ್ರತಿಭಟನೆಯನ್ನು ನಡೆಸುತ್ತಿದೆ. ಜಾಗತಿಕ ಗಮನ ಸೆಳೆದಿರುವ ಈ ಐತಿಹಾಸಿಕ ಪ್ರತಿಭಟನೆಗೆ ಕಾರ್ಪೊರೇಟ್ ಪರ ಮತ್ತು ಜೀವ ವಿರೋಧಿ ಧೋರಣೆ ಹೊಂದಿರುವ ಕೇಂದ್ರದ ಬಿಜೆಪಿ ಸರಕಾರವು ಯಾವುದೇ ಮನ್ನಣೆ ನೀಡುತ್ತಿಲ್ಲ ಎಂದು ಪಿಎಫ್ ಐ ತಿಳಿಸಿದೆ.

ಈಗಾಗಲೇ ಸರಕಾರ ಮತ್ತು ರೈತರ ನಡುವೆ ನಡೆದಿರುವ ಮಾತುಕತೆಗಳೂ ವಿಫಲಗೊಂಡಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ಗಣರಾಜ್ಯೋತ್ಸವ ದಿನದಂದು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ಪರೇಡ್ ಮಹತ್ವ ಪಡೆದುಕೊಂಡಿದೆ. ಪ್ರಸಕ್ತ ಕೃಷಿ ಕಾಯ್ದೆಗಳು ದೇಶದ ಅನ್ನದಾತರ ಪಾಲಿಗೆ ಮಾತ್ರವಲ್ಲ, ಎಲ್ಲಾ ವರ್ಗದ ಸಮುದಾಯಗಳ ಮೇಲೆಯೂ ಗಂಭೀರ ಪರಿಣಾಮವನ್ನು ಬೀರಲಿವೆ ಎಂಬುದು ಬಹಳ ಸ್ಪಷ್ಟವಾಗಿದೆ ಎಂದು ಪಿಎಫ್ ಐ ಅಭಿಪ್ರಾಯ ಪಟ್ಟಿದೆ.

- Advertisement -

ರಾಜ್ಯದ ಬಿಜೆಪಿ ಸರಕಾರವು ಜಾರಿಗೆ ತಂದಿರುವ ಭೂ ತಿದ್ದುಪಡಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಗಳು ಕೂಡ ಜನವಿರೋಧಿ ಕಾಯ್ದೆಗಳಾಗಿದ್ದು, ಇದರ ಬಗ್ಗೆಯೂ ರಾಜ್ಯದ ಜನತೆಯ ಗಮನ ಸೆಳೆಯಬೇಕಾಗಿದೆ ಎಂದು ಪಿಎಫ್ ಐ ತಿಳಿಸಿದೆ.

ಫ್ಯಾಶಿಸ್ಟ್-ಸರ್ವಾಧಿಕಾರಿ ಧೋರಣೆ ಹೊಂದಿರುವ ಕೇಂದ್ರ-ರಾಜ್ಯ ಬಿಜೆಪಿ ಸರಕಾರಗಳ ಜನ ವಿರೋಧಿ ಕಾಯ್ದೆಗಳ ವಿರುದ್ಧ ರೈತರು, ಕಾರ್ಮಿಕರು, ದಲಿತರು, ಇತರ ಶೋಷಿತ ಸಮುದಾಯಗಳು ನಡೆಸುವ ಎಲ್ಲಾ ಹೋರಾಟಗಳಲ್ಲೂ ಪಾಪ್ಯುಲರ್ ಫ್ರಂಟ್ ಐಕ್ಯಮತವನ್ನು ಪ್ರದರ್ಶಿಸುತ್ತದೆ. ಅದೇ ರೀತಿ ದೆಹಲಿಯಲ್ಲಿ ರೈತರ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರಜಾಸತ್ತಾತ್ಮಕ ಹೋರಾಟವನ್ನು ಬೆಂಬಲಿಸಿ ರಾಜ್ಯದಲ್ಲಿ ನಡೆಯುವ ಟ್ರ್ಯಾಕ್ಟರ್ ಪರೇಡನ್ನು ಯಶಸ್ವಿಗೊಳಿಸಲು ರಾಜ್ಯದ ಜನತೆ ಕೈಜೋಡಿಸಬೇಕೆಂದು ಪಾಪ್ಯುಲರ್ ಫ್ರಂಟ್ ಕರೆ ನೀಡಿದೆ.

Join Whatsapp