ನವದೆಹಲಿ : ಕೇಂದ್ರ ಸರಕಾರದ ನೂತನ ಕೃಷಿ ನೀತಿಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲಿಸಿದ ನಟ ದೀಪ್ ಸಿಧು ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಸಮನ್ಸ್ ಜಾರಿಗೊಳಿಸಿದೆ. ಸಿಖ್ಸ್ ಫಾರ್ ಜಸ್ಟೀಸ್ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ದೀಪ್ ಸಿಧುಗೆ ನೋಟಿಸ್ ಜಾರಿಯಾಗಿದೆ.
ಎನ್ಐಎ ಈ ಬೆಳವಣಿಗೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸಿಧು, ಇದು ಸರಕಾರದ ನಿರ್ದೇಶನದಲ್ಲಿ ನಡೆಯುತ್ತಿದೆ ಎಂದು ಆಪಾದಿಸಿದ್ದಾರೆ.
ಸಿಧು ಸೇರಿದಂತೆ ಸುಮಾರು 40 ಜನರಿಗೆ ಎನ್ ಐಎ ಸಮನ್ಸ್ ಜಾರಿಗೊಳಿಸಿದೆ. ಸಿಖ್ಸ್ ಫಾರ್ ಜಸ್ಟೀರ್ ವಿರುದ್ಧ ಸಿಆರ್ ಪಿಸಿ ಕಲಂ 160ರಡಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿಗಳಾಗಿ ಪರಿಶೀಲನೆಗೆ ನೋಟಿಸ್ ಜಾರಿ ಮಾಡಲಾಗಿದೆ. ನವದೆಹಲಿಯ ಕೇಂದ್ರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ದೀಪ್ ಸಿಧುಗೆ ನಿರ್ದೇಶಿಸಲಾಗಿದೆ.
ಕೃಷಿ ಕಾನೂನು ವಿರುದ್ಧದ ರೈತರ ಪ್ರತಿಭಟನೆಗೆ ಬೆಂಬಲಿಸಿದವರ ವಿರುದ್ಧ ಸರಕಾರದ ನಿರ್ದೇಶನದಲ್ಲಿ ಎನ್ ಐಎ ವಿಚಾರಣೆ ಕೈಗೆತ್ತಿಗೊಂಡಿದೆ ಎಂದು ಸಿಧು ಹೇಳಿದ್ದಾರೆ.
ರೈತ ಮುಖಂಡ ಬಲದೇವ್ ಸಿಂಗ್ ಸಿರ್ಸಾ ಅವರಿಗೂ ಎನ್ ಐಎ ಸಮನ್ಸ್ ಜಾರಿಗೊಳಿಸಿದೆ. ಬಿಜೆಪಿ ಸರಕಾರದ ನಿರ್ದೇಶನಕ್ಕೆ ತಕ್ಕಂತೆ ಕೇಂದ್ರ ತನಿಖಾ ಸಂಸ್ಥೆಗಳು ವರ್ತಿಸುತ್ತವೆ ಎಂಬ ವ್ಯಾಪಕ ಆರೋಪಗಳ ನಡುವೆಯೂ, ರೈತ ಹೋರಾಟದಲ್ಲಿ ಭಾಗಿಯಾದ ಪ್ರಮುಖರ ವಿರುದ್ಧ ನೋಟಿಸ್ ಜಾರಿಗೊಳಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.