ಸರ್ಕಾರ-ರೈತರ ನಡುವೆ 9ನೇ ಸುತ್ತಿನ ಮಾತುಕತೆ : ನಿರೀಕ್ಷೆಗಳಿಲ್ಲದ ಸಭೆ

Prasthutha|

ನವದೆಹಲಿ : ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟ 52ನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನಗಳಲ್ಲಿ ಸರ್ಕಾರ ಮತ್ತು ರೈತರ ನಡುವೆ 8 ಸುತ್ತಿನ ಮಾತುಕತೆಗಳು ನಡೆದಿದ್ದು, ಇಂದು(ಜ. 15) 9ನೇ ಸುತ್ತಿನ ಮಾತುಕತೆ ನಿಗದಿಯಾಗಿದೆ.

- Advertisement -

ಆದರೆ ರೈತ ಹೋರಾಟ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎರಡು ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಮ್‌ ಕೋರ್ಟ್‌ ಮಂಗಳವಾರ ರೈತರ ಬೇಡಿಕೆ ಆಲಿಸಿ, ಕಾಯ್ದೆಗಳ ಅನುಷ್ಠಾನ ಕುರಿತು ಸ್ಪಷ್ಟತೆ ಪಡೆಯಲು ಸಮಿತಿ ರಚಿಸಿ ಆದೇಶ ಹೊರಡಿಸಿತ್ತು.

ಈ ಹಿನ್ನೆಲೆಯಲ್ಲಿ ಸಮಾನಾಂತರವಾಗಿ ಸರ್ಕಾರದೊಂದಿಗೆ ಮಾತುಕತೆ ನಡೆಸುವುದು ವ್ಯರ್ಥ ಎಂಬ ನಿಲುವಿದ್ದರೂ ಇಂದು ಸಭೆ ನಡೆಯುತ್ತಿದೆ. ಕೇಂದ್ರ ಸರ್ಕಾರ ರೈತರ ಮನವೊಲಿಸುವ ನಿಟ್ಟಿನಲ್ಲಿ ಮಾತುಕತೆಗೆ ಸಿದ್ಧವಾಗಿದ್ದು, ದರ್ಶನ್‌ ಪಾಲ್‌ ಹಾಗೂ ಹಿರಿಯ ರೈತ ಮುಖಂಡರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

- Advertisement -

ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು, ಕನಿಷ್ಠ ಬೆಂಬಲ ಬೆಲೆ ಕುರಿತು ತಮ್ಮ ಬೇಡಿಕೆಯ ವಿಷಯದಲ್ಲಿ ಪಟ್ಟು ಹಿಡಿದಿರುವ ರೈತರು ಕಳೆದ 8 ಸುತ್ತಿನ ಮಾತುಕತೆಗಳಲ್ಲಿ ಕೇಂದ್ರ ಸರ್ಕಾರದ ಯಾವುದೇ ಸಲಹೆಗಳಿಗೆ ಒಪ್ಪಿಲ್ಲ.

ಈಗ ಸುಪ್ರೀಮ್‌ ಕೋರ್ಟ್‌ ಸಮಿತಿ ರಚಿಸಿದ್ದು, ರೈತರೊಂದಿಗೆ ಸಮಾಲೋಚಿಸುವುದಕ್ಕೆ ಜ. 19ರಂದು ಸಭೆ ನಿಗದಿಯಾಗಿದೆ. ಅಂದರೆ ಇಂದಿನ 9ನೇ ಸುತ್ತಿನ ಮಾತುಕತೆ ಸರ್ಕಾರ ಮತ್ತು ರೈತರ ನಡುವಿನ ನಡೆಯುವ ಕಡೆಯ ಮಾತುಕತೆಯಾಗಲಿದೆ.

ಈ ಸಭೆಯ ಬಗ್ಗೆ ಹೋರಾಟ ನಿರತ ರೈತರು, ರೈತ ನಾಯಕರು ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲವಾದರೂ, ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ

Join Whatsapp