ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿವಾದಿತ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿ ಪ್ರದೇಶಗಳಲ್ಲಿ ಕಳೆದ ಆರು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಹೋರಾಟ ತೀವ್ರಗೊಳಿಸುವ ಮುನ್ಸೂಚನೆಯಿಂದ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಉತ್ತರ ಪ್ರದೇಶ, ಹರ್ಯಾಣದಿಂದ ಸುಮಾರು ಐವತ್ತು ಸಾವಿರ ರೈತರು ದೆಹಲಿ ಗಡಿ ಪ್ರದೇಶಗಳಿಗೆ ಆಗಮಿಸಲಿದ್ದಾರೆ ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆದರೆ, ಅಂತಹ ಯಾವುದೇ ಯೋಜನೆಯಿಲ್ಲ ಎಂದು ರೈತ ಸಂಘಟನೆಗಳು ತಿಳಿಸಿವೆ.
ಪಾಣಿಪತ್ ಟೋಲ್ ಪ್ಲಾಝಾದಿಂದ ಸಿಂಘು ಗಡಿಗೆ ಬರುವಂತೆ ರೈತರಿಗೆ ಸಂಘಟನೆಯೊಂದು ಕರೆ ನೀಡಿದೆ. ಅವರ ಪೋಸ್ಟರ್ ಪ್ರಕಾರ ದೆಹಲಿಗೆ ತೆರಳುವ ಪ್ರಸ್ತಾಪವೂ ಇದೆ. ಹೀಗಾಗಿ ಆಂತರಿಕ ಮತ್ತು ಹೊರಗಿನ ಪಡೆಗಳನ್ನು ಜಮಾಯಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂರು ವಿವಾದಿತ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ದೆಹಲಿ ಗಡಿ ಪ್ರದೇಶಗಳಲ್ಲಿ ಕಳೆದ ಆರು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.