ಶಿವಮೊಗ್ಗದಲ್ಲಿ ಸೋಮವಾರ ರೈತರ ವಿನೂತನ ಪ್ರತಿಭಟನೆ | ‘ರಿಲಯನ್ಸ್’ ಜಿಯೊ ಸಿಮ್ ನಿಂದ ಸಾಮೂಹಿಕ ಪೋರ್ಟ್ ಆಗಲು ಸಿದ್ಧತೆ

Prasthutha|

ಶಿವಮೊಗ್ಗ : ದೆಹಲಿ ಗಡಿ ಭಾಗದಲ್ಲಿ ಕೊರೆವ ಚಳಿಯಲ್ಲಿ, ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸುವ ಸಲುವಾಗಿ ಶಿವಮೊಗ್ಗದಲ್ಲಿ ನಾಳೆ (ಡಿ.28) ರಿಲಯನ್ಸ್ ಸಮೂಹದ ಜಿಯೊ ಸಿಮ್ ನಿಂದ ಏರ್ ಟೆಲ್ ಸಿಮ್ ಗೆ ಸಾಮೂಹಿಕ ಪೋರ್ಟ್ ಆಗುವ ವಿನೂತನ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.

- Advertisement -

ನಾಳೆ ಶಿವಮೊಗ್ಗದ ಶಿವಮೂರ್ತಿ ಸರ್ಕಲ್ ನಲ್ಲಿರುವ ಏರ್ ಟೆಲ್ ಕಚೇರಿ ಮುಂದೆ ಜಮಾವಣೆಗೊಂಡು ನೂರಾರು ಕಾರ್ಯಕರ್ತರು ಎಚ್.ಆರ್. ಬಸವರಾಜಪ್ಪನವರ ನೇತೃತ್ವದಲ್ಲಿ ತಮ್ಮ ಜಿಯೊ ನಂಬರ್ ನಿಂದ ಹೊರಬಂದು, ಏರ್ ಟೆಲ್ ಗೆ ಚಂದಾದಾರರಾಗಲು ಯೋಜಿಸಿದ್ದಾರೆ. ಈ ಮೂಲಕ ರೈತ ಚಳವಳಿಯನ್ನು ಗಟ್ಟಿಗೊಳಿಸಲು, ಕಾರ್ಪೊರೇಟ್ ಕಂಪೆನಿಗಳನ್ನು ಹಿಮ್ಮೆಟ್ಟಿಸಲು ರೈತರು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಸರಕಾರ ತರಲು ಹೊರಟಿರುವ ನೂತನ ಕೃಷಿ ಕಾನೂನುಗಳು ಶ್ರೀಮಂತ ಉದ್ಯಮಿಗಳಾದ ಮುಖೇಶ್ ಅಂಬಾನಿ, ಗೌತಮ ಅದಾನಿಯಂತಹವರ ನೇತೃತ್ವದ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ತರಲಿದೆ ಎನ್ನಲಾಗುತ್ತಿದೆ. ಕೊರೆವ ಚಳಿಯಲ್ಲಿ ರೈತರು ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದರೂ, ಪ್ರತಿಭಟನೆ ನಡೆಸುತ್ತಿರುವವರು ರೈತರೇ ಅಲ್ಲ ಎಂಬ ರೀತಿ ಅಪಪ್ರಚಾರ ನಡೆಸುತ್ತಾ, ಉದ್ಧಟತನ ತೋರಲಾಗುತ್ತಿದೆ. ಹೀಗಾಗಿ ದೇಶಾದ್ಯಂತ ಈಗ ರೈತರ ಆಕ್ರೋಶ ಸರಕಾರವನ್ನು ಬಿಟ್ಟು, ಖಾಸಗಿ ಕಾರ್ಪೊರೇಟ್ ಸಂಸ್ಥೆಗಳತ್ತ ತಿರುಗಿದೆ.

- Advertisement -

ಈಗಾಗಲೇ ಸಾಕಷ್ಟು ರೈತರು ಮುಖ್ಯವಾಗಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಮೂಹದ ಜಿಯೊ ಮೊಬೈಲ್ ಸಿಮ್ ಅನ್ನು ಬೇರೆ ಕಂಪೆನಿಯ ಸಿಮ್ ಗಳಿಗೆ ಬದಲಾಯಿಸಿಕೊಂಡಿದ್ದಾರೆ. ಇದರಿಂದಾಗಿ, ಬೆಚ್ಚಿಬಿದ್ದಿರುವ ಸ್ವತಃ ರಿಲಯನ್ಸ್ ಸಂಸ್ಥೆ ಟ್ರಾಯ್ ಗೆ ಪತ್ರ ಬರೆದಿದ್ದು, ತಮ್ಮ ಪ್ರತಿಸ್ಪರ್ಧಿಗಳು ತಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿವೆ ಎಂದು ಆಪಾದಿಸಿದೆ. ಈ ನಡುವೆ, ಸುಮಾರು 30 ಲಕ್ಷಕ್ಕೂ ಹೆಚ್ಚು ಜನರು ಜಿಯೊದಿಂದ ಬೇರೆ ಕಂಪೆನಿಗೆ ತಮ್ಮ ಸಿಮ್ ಬದಲಾಯಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದೆಡೆ, ಮುಕೇಶ್ ಅಂಬಾನಿ ಜಗತ್ತಿನ ಟಾಪ್ 10 ಶ್ರೀಮಂತರ ಪಟ್ಟಿಯಿಂದಲೂ ಹೊರದಬ್ಬಲ್ಪಟ್ಟಿರುವ ವರದಿಯೂ ಬಂದಿದೆ.

ಇತ್ತೀಚೆಗೆ ಬಂದಿರುವ ಹೊರಬಂದಿರುವ ಭಾರತದಲ್ಲಿನ ಸಕ್ರಿಯ ಮೊಬೈಲ್ ಬಳಕೆದಾರರ ವಿಭಾಗದಲ್ಲಿ ಏರ್ ಟೆಲ್ ಜಿಯೊವನ್ನು ಹಿಂದಿಕ್ಕಿರುವುದು ವರದಿಯಾಗಿದೆ. ಏರ್ ಟೆಲ್ ಗೆ ಒಟ್ಟು ಶೇ.33.3 ಸಕ್ರಿಯ ಬಳಕೆದಾರರಿದ್ದರೆ, ಜಿಯೊಗೆ ಶೇ.33.2ರಷ್ಟಿದ್ದಾರೆ ಎಂದು ವರದಿ ತಿಳಿಸಿದೆ. ಜಿಯೊದಿಂದ ಏರ್ ಟೆಲ್ ಗೆ ಪೋರ್ಟ್ ಆಗುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಪ್ರಧಾನಿ ಮೋದಿಗೆ ಆಪ್ತರೆನ್ನಲಾಗುತ್ತಿರುವ ಅಂಬಾನಿ ಮತ್ತು ಅದಾನಿ ನೇತೃತ್ವದ ಕಾರ್ಪೊರೇಟ್ ಕಂಪೆನಿಗಳಿಗೆ ಸೇರಿದ ಸರಕುಗಳಿಗೆ ಈ ರೀತಿ ಬಹಿಷ್ಕಾರ ಹಾಕುವ ಮೂಲಕ ಸರಕಾರದ ನೂತನ ಕಾಯ್ದೆಯನ್ನು ಹಿಮ್ಮೆಟ್ಟಿಸಬಹುದು ಎಂಬುದು ರೈತರ ಲೆಕ್ಕಾಚಾರವಿದ್ದಂತೆ ಕಂಡುಬರುತ್ತಿದೆ.  

Join Whatsapp