ಚಂಡೀಗಡ: ಕರ್ನಾಲ್ ಜಿಲ್ಲೆಯಲ್ಲಿ ರೈತರ ವಿರುದ್ಧ ಪೊಲೀಸರ ಕ್ರೂರ ಕ್ರಮವನ್ನು ವಿರೋಧಿಸಿ ಆಕ್ರೋಶಿತ ರೈತರು ಹರ್ಯಾಣದಾದ್ಯಂತ ಅನೇಕ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟಿಸಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಕುರುಕ್ಷೇತ್ರ, ದೆಹಲಿ-ಅಮೃತಸರ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಅದೇ ರೀತಿಯಲ್ಲಿ ಅಂಬಾಲಕ್ಕೆ ತೆರಳುವ ಶಂಭು ಟೋಲ್ ಪ್ಲಾಝದಲ್ಲಿ ಟ್ರಾಪಿಕ್ ಜಾಮ್ ಉಂಟಾಗಿದೆ.
ರೈತರು ಬಿದಿರಿನ ಹಾಸಿಗೆಯ ಮೇಲೆ ಕುಳಿತು ರಸ್ತೆಯ ಉದ್ದಗಲಕ್ಕೂ ಬೃಹತ್ ಸಂಖ್ಯೆಯಲ್ಲಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ಈ ನಿಟ್ಟಿನಲ್ಲಿ ಕಾರು, ಬಸ್ಸು ಮತ್ತು ಟ್ರಕ್ ಗಳು ಕನಿಷ್ಠ ಮೂರು ಕಿ.ಮೀ ಬ್ಲಾಕ್ ಆಗಿರುವುದು ವೀಡಿಯೋ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.
ಇತರ ದೃಶ್ಯಗಳಲ್ಲಿ ಇಬ್ಬರು ಪೊಲೀಸರು ಗಲಭೆಯಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯೊಂದಿಗೆ ಅನುಚಿತವಾಗಿ ವರ್ತಿಸುವುದು ಕಂಡುಬಂದಿದೆ. ಆತನ ಶರ್ಟ್ ಮತ್ತು ಎಡಗಾಲಿನಲ್ಲಿ ರಕ್ತಸ್ರಾವ ಆಗುತ್ತಿತ್ತು ಮತ್ತು ತಲೆಯ ಮೇಲಿನ ರಕ್ತಸ್ರಾವದಿಂದಾಗಿ ಬ್ಯಾಂಡೇಜ್ ಕಟ್ಟಲಾಗಿತ್ತು. ಇದನ್ನು ಗಣನೆಗೆ ತೆಗೆಯದ ಪೊಲೀಸರು ಆತನೊಂದಿಗೆ ಅನುಚಿತವಾಗಿ ವರ್ತಿಸಿದ್ದರು.
ಕರ್ನಾಲ್ ನಲ್ಲಿ ರೈತರ ಮೇಲೆ ನಡೆದ ಲಾಠಿಚಾರ್ಜ್ ಅನ್ನು ವಿರೊಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಬಿಜೆಪಿ ಒಪಿ ಧಂಕರ್ ಅವರ ಬೆಂಗಾವಲನ್ನು ತಡೆಯಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ರೈತರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆಯೆಂದು ಪೊಲೀಸರು ಆರೋಪಿಸಿದ್ದಾರೆ.
ಈ ಘರ್ಷಣೆಯ ನಂತರ ರೈತರು ಸುಮಾರು 30 ಕಿಲೋಮೀಟರ್ ದೂರದಲ್ಲಿ ನಡೆಯುತ್ತಿರುವ ಬಿಜೆಪಿ ನಾಯಕರು ಮತ್ತು ಚುನಾಯಿತ ಪ್ರತಿನಿಧಿಗಳ ರಾಜ್ಯ ಮಟ್ಟದ ಸಭೆಯನ್ನು ತಲುಪಲು ಪ್ರಯತ್ನಿಸಿದರು ಎಂದು ವರದಿಗಳು ಹೇಳುತ್ತವೆ. ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಕೃಷಿ ಕಾಯ್ದೆಯನ್ನು ವಿರೋಧಿಸಲು ಒಗ್ಗೂಡಿದ ರೈತರ ಮೇಲೆ ಕ್ರೂರ ನಡೆಯನ್ನು ಪ್ರದರ್ಶಿಸಿದ್ದ ಪೊಲೀಸರನ್ನು ತರಾಟೆಗೆ ತೆಗೆಯಲಾಯಿತು. ಮಾತ್ರವಲ್ಲ ರಾಜ್ಯಾದ್ಯಂತ ಸಂಘಟಿತ ಪ್ರತಿಭಟನೆಗೆ ಒಗ್ಗೂಡಲು ರೈತ ಮುಖಂಡರು ಕರೆ ನೀಡಿದ್ದಾರೆ.
ಈ ಸಂಬಂಧ ಎಸ್.ಕೆ. ಎಮ್ ನಾಯಕರಾದ ದರ್ಶನ್ ಪಾಲ್ ಅವರು ಇಂದು ಸಂಜೆ 5 ಗಂಟೆಗೆ ರಾಜ್ಯದ ಎಲ್ಲಾ ಹೆದ್ದಾರಿಗಳಲ್ಲಿ ಪ್ರತಿಭಟಿಸುವಂತೆ ರೈತರಿಗೆ ಕರೆ ನೀಡಿದರು. ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹಲವಾರು ಸುತ್ತಿನ ಮಾತುಕತೆ ನಡೆಸಲಾಗಿದೆ. ಆದರೆ ಸರ್ಕಾರ ಈ ಕಾನೂನನ್ನು ರದ್ದುಗೊಳಿಸಲು ನಿರಾಕರಿಸಿದೆ.