ಕಣ್ಣೆದುರೇ ಸಂಬಂಧಿಯ ಮೇಲೆ ಪೊಲೀಸರ ಅಮಾನವೀಯ ವರ್ತನೆ | ಹೆದರಿ ಆತ್ಮಹತ್ಯೆಗೆ ಶರಣಾದ ಯುವತಿ

Prasthutha|

ಕಣ್ಣೆದುರೇ ಸಂಬಂಧಿಯ ಮೇಲೆ ಪೊಲೀಸರ ಅಮಾನವೀಯ ವರ್ತನೆ | ಹೆದರಿ ಆತ್ಮಹತ್ಯೆಗೆ ಶರಣಾದ ಯುವತಿ

- Advertisement -

ಫರೀದಾಬಾದ್ : ವಂಚನೆ ಪ್ರಕರಣವೊಂದರಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬನ ಬಾಯಿ ಬಿಡಿಸಲು ಆತನ ಇಡೀ ಕುಟುಂಬಸ್ಥರ ಮೇಲೆ ಪೊಲೀಸರು ಹೀನಾಯವಾಗಿ ನಡೆಸಿಕೊಂಡಿದ್ದುದನ್ನು ಕಂಡು ಹೆದರಿದ ಯುವತಿಯೊಬ್ಬಳು ನೇಣಿಗೆ ಶರಣಾದ ಘಟನೆ ಹರ್ಯಾಣದ ಫರೀದಾಬಾದ್ ನಲ್ಲಿ ನಡೆದಿದೆ.

ಫರೀದಾಬಾದ್ ನ ರಾಜೇಂದ್ರ ಪಾರ್ಕ್ ನಿವಾಸಿ ಆಶಾ (21) ಎಂಬಾಕೆ ಪೊಲೀಸರ ಹಿಂಸಾತ್ಮಕ ನಡೆಯನ್ನು ನೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೇಣು ಬಿಗಿದುಕೊಂಡಿದ್ದ ಆಕೆಯನ್ನು ಮನೆಯವರು ಆಸ್ಪತ್ರೆಗೆ ಸಾಗಿಸಿದರಾದರೂ, ಆಕೆ ಕೊನೆಯುಸಿರೆಳೆದಿದ್ದಾಳೆ.

- Advertisement -

ತನ್ನ ಮಗಳ ಸಾವಿಗೆ ಪೊಲೀಸರೇ ಕಾರಣ ಎಂದು ಯುವತಿಯ ಪೋಷಕರು ಆಪಾದಿಸಿದ್ದಾರೆ. ಹೀಗಾಗಿ ಅವರು ನ್ಯಾಯಕ್ಕಾಗಿ ಒತ್ತಾಯಿಸಿ ಮಗಳ ಶವವನ್ನು ಪಡೆಯಲು ಹಿಂದೇಟು ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಯುವತಿಯ ಮಾವ ಸುರೇಶ್ ಎಂಬಾತ ಅಪರಾಧ ಪ್ರಕರಣವೊಂದರಲ್ಲಿ ಆರೋಪಿ. ವಂಚನೆ ಪ್ರಕರಣದಲ್ಲಿ ರಾಹುಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆತನ ವಿಚಾರಣೆ ವೇಳೆ ಆತ ಯುವತಿಯ ಮಾವನ ಹೆಸರು ಹೇಳಿದ್ದ. ಆದರೆ, ಆತನನ್ನು ಬಂಧಿಸಿದಾಗ ಆತ ತಪ್ಪು ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಪೊಲೀಸರು ಆತನನ್ನು ಬೆತ್ತಲೆಗೊಳಿಸಿ ಹೊಡೆದಿದ್ದಾರೆ ಎನ್ನಲಾಗಿದೆ.

ಅಲ್ಲದೆ ಆಶಾಳ ಕುಟುಂಬಸ್ಥರ ಜೊತೆಗೂ ಪೊಲೀಸರು ಹೀನಾಯವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ ಮುಂದೆ ಪೊಲೀಸರು ತನ್ನ ಬಳಿಯೂ ಇದೇ ರೀತಿ ವರ್ತಿಸಬಹುದು ಎಂದು ಹೆದರಿ ಆತ್ಮಹತ್ಯೆಗೈದಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸದ್ಯ ಆರೋಪಿ ಪೊಲೀಸರ ವಿರುದ್ಧ ದೂರು ದಾಖಲಾಗಿದೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪೋಷಕರು ಆಶಾಳ ಮೃತದೇಹ ಪಡೆದಿದ್ದಾರೆ.  

Join Whatsapp