ಉದ್ಯೋಗ ಸೃಷ್ಟಿಯ ವಿಷಯದಲ್ಲಿ ಜಾಹೀರಾತುಗಳ ಮೂಲಕ ಸುಳ್ಳು ಪ್ರಕಟಣೆ: ಸಿದ್ದರಾಮಯ್ಯ ಕಿಡಿ

Prasthutha|

ಬೆಂಗಳೂರು: ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ. ಜಾಹೀರಾತುಗಳ ಮೂಲಕ ಸುಳ್ಳು ಪ್ರಕಟಣೆಗಳನ್ನು ನಿರುದ್ಯೋಗಿ ಯುವಜನರಿಗೆ ಅವಮಾನ ಮಾಡಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳಿಗೆ ಒಂದು ಗುಲಗಂಜಿಯಷ್ಟಾದರೂ ನಾಚಿಕೆ ಇದೆಯೆ ಎಂದು ನನಗೆ ಅನುಮಾನವಾಗಿದೆ. ಜನರ ತೆರಿಗೆ ಹಣವನ್ನು ಬಳಸಿ ಜಾಹೀರಾತುಗಳ ಮೂಲಕ ಸುಳ್ಳುಗಳನ್ನು ಮಾರಾಟ ಮಾಡುವ ಹೀನಾತಿಹೀನ ರಾಜಕೀಯವನ್ನು ಬಿಜೆಪಿ ಸರ್ಕಾರಗಳು ಮಾಡುತ್ತಿವೆ. ಕೋಟಿಗಟ್ಟಲೆ ವೆಚ್ಚದ ಜಾಹೀರಾತುಗಳನ್ನು ಪ್ರತಿನಿತ್ಯ ಬಿಡುಗಡೆ ಮಾಡಲಾಗುತ್ತಿದೆ. ನಾನು ಜಾಹೀರಾತುಗಳನ್ನು ಕೊಡಬೇಡಿ ಎಂದು ಹೇಳುತ್ತಿಲ್ಲ. ಆದರೆ ಸತ್ಯಸಂಗತಿಗಳನ್ನು ಮಾತ್ರ ಜನರಿಗೆ ಹೇಳಿ ಎಂದಷ್ಟೆ ಆಗ್ರಹ ಮಾಡುತ್ತಿದ್ದೇನೆ ಎಂದು ಹೇಳಿದರು.
ನಿರುದ್ಯೋಗದ ವಿಷಯದಲ್ಲೂ ಹೀಗೆಯೆ ಆಗಿದೆ. ರಾಜ್ಯ ಸರ್ಕಾರ ದಿನಾಂಕ 22-3-2023 ರಂದು ಯುಗಾದಿಯ ದಿನ ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ 68.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಿಕೊಂಡಿದೆ. ಹಾಗಿದ್ದರೆ ವಾಸ್ತವದಲ್ಲಿ ನಿರುದ್ಯೋಗ ಕಡಿಮೆಯಾಗಬೇಕಿತ್ತಲ್ಲ? ಆಗಿದೆಯಾ? ಎಲ್ಲಿ ಹುಡುಕಿದರೂ ಉದ್ಯೋಗ ಸಿಗುತ್ತಿಲ್ಲವೆಂದು ಲಕ್ಷಾಂತರ ಯುವಜನರು ಉದ್ಯೋಗ ಹುಡುಕುವುದನ್ನೆ ನಿಲ್ಲಿಸಿದ್ದಾರೆ ಎಂದು ಟೀಕಿಸಿದರು.
ನಿರುದ್ಯೋಗದ ಬಗ್ಗೆ ಅಧಿಕೃತವಾಗಿ ಹಲವು ಸಂಸ್ಥೆಗಳು ಕೆಲಸ ಮಾಡುತ್ತಿವೆ. ಅದರಲ್ಲಿ ಮುಖ್ಯವಾಗಿ ಸಿಎಂಐಇ (ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ) ಕೂಡ ಒಂದು. ಈ ಸಂಸ್ಥೆಯು ಬಿಡುಗಡೆ ಮಾಡಿರುವ ದಾಖಲೆಗಳನ್ನು ನೋಡಿದರೆ ರಾಜ್ಯದ ನಿರುದ್ಯೋಗದ ಪ್ರಮಾಣ ಭಯ ಹುಟ್ಟಿಸುತ್ತದೆ. ಸಿಎಂಐಇ ಸಂಸ್ಥೆ ಪ್ರತಿ ದಿನದ ನಿರುದ್ಯೋಗದ ಪ್ರಮಾಣವನ್ನು ಬಿಡುಗಡೆ ಮಾಡುವ ಜತೆಗೆ ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ಸಮಗ್ರವಾದ ಉದ್ಯೋಗ ಮತ್ತು ನಿರುದ್ಯೋಗದ ಚಿತ್ರಣಗಳನ್ನು ನೀಡುತ್ತದೆ. ಈ ಸಂಸ್ಥೆಯ ಅಂಕಿಅಂಶಗಳನ್ನು ಸರ್ಕಾರದ ಇಲಾಖೆಗಳು ಹಾಗೂ ಮಾಧ್ಯಮಗಳು ಬಳಸುತ್ತವೆ. ಹಾಗಾಗಿ ಈ ಸಂಸ್ಥೆಯ ಅಂಕಿಅಂಶಗಳಿಗೆ ಅಧಿಕೃತತೆ ಇದೆ. ಸಿಎಂಐಇ ಸಂಸ್ಥೆಯ ಪ್ರಕಾರ 2022 ರಲ್ಲಿ ಕಾರ್ಮಿಕರ ಪಾಲ್ಗೊಳ್ಳುವಿಕೆಯ ಒಟ್ಟಾರೆ ಪ್ರಮಾಣವು ಶೇ.37.88 ರಷ್ಟಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ ಒಟ್ಟು ದುಡಿಮೆ ಮಾಡಲು ಬಯಸುವವರ ಸಂಖ್ಯೆ 2.49 ಕೋಟಿ ಎಂದು ಅಂದಾಜು ಮಾಡಿದ್ದಾರೆ. ಆದರೆ, ಯಾವುದೊ ಒಂದು ಉದ್ಯೋಗ ಲಭಿಸಿರುವುದು ಕೇವಲ 2.1 ಕೋಟಿ ಜನರಿಗೆ ಮಾತ್ರ. ಸುಮಾರು 30 ಲಕ್ಷ ಜನರಿಗೆ ಯಾವ ಉದ್ಯೋಗವೂ ಇಲ್ಲದೆ ಪರದಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಉದ್ಯೋಗವೇ ಸಿಗುತ್ತಿಲ್ಲವೆಂದು ಉದ್ಯೋಗಕ್ಕಾಗಿ ಹುಡುಕಾಟ ನಿಲ್ಲಿಸಿರುವವರ ಸಂಖ್ಯೆ 23.71 ಲಕ್ಷ. ಉದ್ಯೋಗ ಸಿಗುತ್ತದೆ ಎಂಬ ಭರವಸೆಯನ್ನು ಕಳೆದುಕೊಂಡಿರುವ ಯುವಶಕ್ತಿಗೆ ಬಿಜೆಪಿ ಸರ್ಕಾರಗಳು ಏನು ಮಾಡಿವೆ? 67.9 ಲಕ್ಷ ಉದ್ಯೋಗ ಸೃಷ್ಟಿಸಿದ್ದೇವೆ ಎಂದು ಹೇಳಿಕೆ ನೀಡುವವರು ಯಾವ ಯಾವ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಮಾಡಿದ್ದೇವೆ ಎಂದೂ ಸಹ ಹೇಳಬೇಕಲ್ಲ?

- Advertisement -

ಈ ಕುರಿತು ಅಧಿಕೃತ ದಾಖಲೆಗಳನ್ನು ಬಿಡುಗಡೆ ಮಾಡಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಉದ್ಯೋಗಕ್ಕಾಗಿ ಹುಡುಕಾಟ ಮಾಡುತ್ತಿರುವವರು ಮತ್ತು ಉದ್ಯೋಗವನ್ನು ಹುಡುಕಿ ಹುಡುಕಿ ಬೇಸತ್ತು ಹುಡುಕಾಟ ನಿಲ್ಲಿಸಿರುವವರನ್ನು ಒಟ್ಟಾಗಿ ಸೇರಿಸಿದರೆ ಅದನ್ನು ಗ್ರೇಟರ್ ಅನ್ ಎಂಪ್ಲಾಯ್’ಮೆಂಟ್ ರೇಟ್ ಎಂದು ಕರೆಯುತ್ತಾರೆ. ಈ ಗ್ರೇಟರ್ ಎಂಪ್ಲಾಯ್’ಮೆಂಟ್ ರೇಟ್ ದರವು 2022 ರ ಏಪ್ರಿಲ್ನಿಂಲದ ಡಿಸೆಂಬರ್’ವರೆಗೆ ಶೇ. 11.73 ರಷ್ಟಿದೆ. ನಗರ ಪ್ರದೇಶದಲ್ಲಿ ಇದರ ಪ್ರಮಾಣ 15.12 ರಷ್ಟು ಇದೆ. ಇದೇ ಅವಧಿಯಲ್ಲಿ ಮಹಿಳೆಯರಲ್ಲಿ ಗ್ರೇಟರ್ ಎಂಪ್ಲಾಯ್’ಮೆಂಟ್ ರೇಟ್ ದರವು ಶೇ.58.55 ರಷ್ಟಿದೆ.
ನಿರುದ್ಯೋಗದ ಪ್ರಮಾಣ ಈಗ ಮಾತ್ರ ಹೆಚ್ಚಾಗಿದೆಯಾ, ಹಿಂದೆಯೂ ಇದೇ ಸ್ಥಿತಿ ಇತ್ತೇ ಎನ್ನುವುದನ್ನು ಪರಿಶೀಲಿಸಲಿಕ್ಕಾಗಿ ನಾನು ಸಿಎಂಐಇ ಸಂಸ್ಥೆಯವರು ಬಹಿರಂಗಪಡಿಸಿದ 2018 ರ ಜನವರಿಯಿಂದ ಏಪ್ರಿಲ್ವ ರೆಗಿನ ನಮ್ಮ ಸರ್ಕಾರದ ಅವಧಿಯ ಅಂಕಿ ಅಂಶಗಳನ್ನು ಗಮನಿಸಿದೆ. 2017-2018 ರಲ್ಲಿ ಕಾರ್ಮಿಕರ ಪಾಲ್ಗೊಳ್ಳುವಿಕೆಯ ಪ್ರಮಾಣವು ಶೇ.46.7 ರಷ್ಟಿತ್ತು. ಇದಕ್ಕೆ ಹೋಲಿಸಿದರೆ 2022ರ ಸೆಪ್ಟೆಂಬರ್ವಟರೆಗಿನ ಡಿಸೆಂಬರ್ ಅವಧಿಯಲ್ಲಿ ಶೇ.37.88 ಕ್ಕೆ ಕಾರ್ಮಿಕರ ಪಾಲ್ಗೊಳ್ಳುವಿಕೆ ಪ್ರಮಾಣವು ಕುಸಿತ ಕಂಡಿದೆ. 2018 ರಲ್ಲಿ ಗ್ರೇಟರ್ ಎಂಪ್ಲಾಯ್’ಮೆಂಟ್ ರೇಟ್ ದರವು 4.42ರಷ್ಟಿತ್ತು. ಅದು 2022 ರಲ್ಲಿ 11.73 ರಷ್ಟಿದೆ. ನಮ್ಮ ಸರ್ಕಾರದ ಅವಧಿಗೆ ಹೋಲಿಸಿದರೆ ಶೇ.7.3 ರಷ್ಟು ನಿರುದ್ಯೋಗ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
2018ರಲ್ಲಿ ನಗರ ಪ್ರದೇಶದ ಗ್ರೇಟರ್ ಅನ್ ಎಂಪ್ಲಾಯಿಂಟ್ ದರವು ಶೇ.6.18 ರಷ್ಟಿತ್ತು. 2022 ರ ಕಡೆಯ ನಾಲ್ಕು ತಿಂಗಳುಗಳಲ್ಲಿ ಈ ಪ್ರಮಾಣವು ಶೇ.12ಕ್ಕೆ ಏರಿಕೆ ಕಂಡಿದೆ. ನಮ್ಮ ಸರ್ಕಾರದ ಅವಧಿಗೆ ಹೋಲಿಸಿದರೆ ಶೇ.8.49 ರಷ್ಟು ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದ ನಿರುದ್ಯೋಗದಲ್ಲಿ 2018 ರಲ್ಲಿ ಶೇ.3.31 ರಷ್ಟಿತ್ತು. 2022 ರಲ್ಲಿ ಇದು 9.22.ಕ್ಕೆ ಹೆಚ್ಚಳವಾಗಿದೆ. ಮಹಿಳೆಯರ ನಿರುದ್ಯೋಗದ ವಿಚಾರದಲ್ಲಿ ನೋಡುವುದಾದರೆ 2018 ರಲ್ಲಿ ಗ್ರೇಟರ್ ಅನ್ ಎಂಪ್ಲಾಯಿಂಟ್ ದರವು ಶೇ.16.46 ರಷ್ಟಿದ್ದರೆ, 2022ರ ಸೆಪ್ಟೆಂಬರ್’ನಿಂದ ಡಿಸೆಂಬರ್’ವರೆಗೂ ಶೇ.58.55 ಕ್ಕೆ ಏರಿಕೆಯಾಗಿದೆ. ಅಂದರೆ ಶೇ.42 ರಷ್ಟು ಹೆಚ್ಚಳ ಕಂಡಿದೆ ಎಂದು ವಿಪಕ್ಷ ನಾಯಕ ಹೇಳಿದ್ದಾರೆ.
ದೇಶದ ಮಹಿಳೆಯರ ಸರಾಸರಿ ನಿರುದ್ಯೋಗ ಪ್ರಮಾಣವು ಶೇ.28 ರಷ್ಟಿದೆ. ಆದರೆ ಕರ್ನಾಟಕದಲ್ಲಿ ಶೇ.58.55 ರಷ್ಟಿದೆ. ಇದನ್ನು ಪ್ರಗತಿ, ಬೆಳವಣಿಗೆ ಎಂದು ಕರೆಯಲು ಸಾಧ್ಯವೆ? ಮಹಾಪತನವನ್ನು ಮಹಾ ಬೆಳವಣಿಗೆ ಎಂದು ಹೇಳುವ ಆತ್ಮವಂಚಕತನ ಬೊಮ್ಮಾಯಿಯವರ ಸರ್ಕಾರಕ್ಕೆ ಯಾಕೆ ಬಂದಿದೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಈ ಮಟ್ಟದ ಭಯಾನಕ ಸ್ಥಿತಿ ರಾಜ್ಯದಲ್ಲಿದ್ದರೂ ಸಹ ರಾಜ್ಯ ಸರ್ಕಾರವು ವಾಸ್ತವ ಸಂಗತಿಗಳ ಮೇಲೆ ಜಾಹೀರಾತುಗಳ ಹೊದಿಕೆ ಹಾಕಿ ಸತ್ಯವನ್ನು ಮರೆಮಾಚಿ ನಿರುದ್ಯೋಗವನ್ನು ಕಡಿಮೆ ಮಾಡಿದ್ದೇವೆ, 67.9 ಲಕ್ಷ ಯುವಕರಿಗೆ ಉದ್ಯೋಗ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳಿ ಜನರನ್ನು ವಂಚಿಸಿದೆ. ಈ ಕುರಿತು ಬೊಮ್ಮಾಯಿಯವರ ಸರ್ಕಾರ ಸ್ಪಷ್ಟವಾದ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಮತ್ತು ಈ ಮಹಾ ಸುಳ್ಳಿನ ಕುರಿತು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.



Join Whatsapp