ಸರಕಾರಿ ಜಾಗಕ್ಕೆ ಕಾನೂನು ಮೀರಿ ನಮೂನೆ 9/11ಎ ನೀಡುವ ಮೂಲಕ ಕರ್ತವ್ಯ ಲೋಪ ಎಸಗಿರುವ ಪಿಡಿಓ: ಸೂಕ್ತ ತನಿಖೆಗೆ ಒತ್ತಾಯ

Prasthutha|

ಮಡಿಕೇರಿ: ಕಾನೂನನು ನಿಯಮಗಳನ್ನು ಗಾಳಿಗೆ ತೂರಿ ಸರಕಾರಿ ಜಾಗಕ್ಕೆ ಸಿದ್ದಾಪುರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಮೂನೆ 9/11ಎ ನೀಡುವ ಮೂಲಕ ಕರ್ತವ್ಯ ಲೋಪ ಎಸಗಿರುವುದಲ್ಲದೆ ಅವ್ಯವಹಾರ ನಡೆಸಿರುವುದಾಗಿ ಸಿದ್ದಾಪುರ ಗ್ರಾಮ ಪಂಚಾಯತಿ ಸದಸ್ಯ ಎಂ.ಎಸ್ ಶಾಹಿನುಲ್ಲಾ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಟಿ.ಸಿ ಸಂಖ್ಯೆ 131/1 ಕ್ಕೆ (15 ಸೆಂಟ್) ನಮೂನೆ 9/11ಎ ನೀಡುವಂತೆ ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಸಿದ್ದಾಪುರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿದ್ದಾಪುರ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿದ್ದರು. ಸದರಿ ಅರ್ಜಿಯ ಬಗ್ಗೆ 12.01.2023 ರಂದು ನಡೆದ ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿ, ದಾಖಲಾತಿ ಪರಿಶೀಲಿಸಿದ ಸಂದರ್ಭದಲ್ಲಿ ಆರ್.ಟಿ.ಸಿ ಯಲ್ಲಿ ಜಾಗದ ಮಾಹಿತಿ ಸರ್ಕಾರದವರು ಎಂದು ನಮೂದಾಗಿದ್ದರಿಂದ 9/11 ಎ ನೀಡಲು ಸಾಧ್ಯವಿಲ್ಲವೆಂದು ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ ಇವೆಲ್ಲವನ್ನು ಗಾಳಿಗೆ ತೂರಿ ಗ್ರಾಮ ಪಂಚಾಯತಿ ಪಿಡಿಓ 9/11 ಎ ನೀಡಿರುವುದಾಗಿ ಆರೋಪಿಸಿದ ಅವರು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಸರಕಾರಿ ಜಾಗಕ್ಕೆ ನಮೂನೆ 9/11ಎ ನೀಡಿರುವುದರ ಹಲವು ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿದ್ದು, ಬಾರಿ ಮೊತ್ತದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಶಾಹಿನುಲ್ಲಾ ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
15.02.2018 ರಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಇ-ಸ್ವತ್ತು ತಂತ್ರಾಂಶಕ್ಕೆ ಬದಲಾವಣೆ ಮಾಡಿ ಸರಕಾರ ಆದೇಶ ಹೊರಡಿಸಿರುವ ಪ್ರಕಾರವಾಗಿಯೇ ಕಾನೂನಿನ ಚೌಕಟ್ಟಿನಲ್ಲಿ 9/11ಎ ನೀಡಲಾಗಿದೆ. ಆದರೆ ಗ್ರಾಮ ಪಂಚಾಯತಿಯ ನಿರ್ಣಯ ಪುಸ್ತಕದಲ್ಲಿ ಕಾರ್ಯದರ್ಶಿಯ ಕೈ ತಪ್ಪಿನಿಂದ 9/11ಎ ಕೊಡಲು ಸಾಧ್ಯವಿಲ್ಲವೆಂದು ಬರೆಯಲಾಗಿದೆ ಎಂದು ಸಿದ್ದಾಪುರ ಗ್ರಾಮ ಪಂಚಾಯತಿ ಪಿಡಿಓ ಮನಮೋಹನ್ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದರು.

- Advertisement -